ADVERTISEMENT

ರಾಜ್ಯದಲ್ಲೂ ರೈತ ಮಹಾ ಪಂಚಾಯತ್‌

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 19:30 IST
Last Updated 16 ಮಾರ್ಚ್ 2021, 19:30 IST
ದೆಹಲಿಯ ಗಡಿ ಭಾಗಗಳಲ್ಲಿ ರೈತ ಹೋರಾಟದಲ್ಲಿ ಭಾಗಿಯಾಗಿದ್ದ ಮಹಿಳೆಯರು–ಸಂಗ್ರಹ ಚಿತ್ರ
ದೆಹಲಿಯ ಗಡಿ ಭಾಗಗಳಲ್ಲಿ ರೈತ ಹೋರಾಟದಲ್ಲಿ ಭಾಗಿಯಾಗಿದ್ದ ಮಹಿಳೆಯರು–ಸಂಗ್ರಹ ಚಿತ್ರ   

ಬೆಂಗಳೂರು: ಉತ್ತರ ಭಾರತದಲ್ಲಿ ಬಿರುಸುಗೊಂಡಿರುವ ರೈತ ಚಳವಳಿಯನ್ನು ದಕ್ಷಿಣ ಭಾರತಕ್ಕೆ ವಿಸ್ತರಿಸುವ ಯತ್ನದ ಭಾಗವಾಗಿ ರೈತ ಮಹಾ ಪಂಚಾಯತ್‌ ನಡೆಸಲು ಸಂಘಟನೆಗಳು ಸಿದ್ಧತೆ ನಡೆಸಿವೆ.

ದಕ್ಷಿಣ ರಾಜ್ಯಗಳಲ್ಲೇ ಮೊದಲ ರೈತ ಮಹಾ ಪಂಚಾಯತ್ ಮಾ.20ರಂದು ಶಿವಮೊಗ್ಗದಲ್ಲಿ ನಡೆಯಲಿದೆ. ದೆಹಲಿಯ ಗಡಿಗಳಲ್ಲಿ ರೈತರ ಹೋರಾಟ ಆರಂಭವಾದ ದಿನದಿಂದ ಕರ್ನಾಟಕದಲ್ಲಿ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ನೇತೃತ್ವದಲ್ಲಿ ಒಗ್ಗಟ್ಟಿನ ಹೋರಾಟ ನಡೆಯುತ್ತಿದೆ. ಬಳಿಕ ‘ಸಂಯುಕ್ತ ಹೋರಾಟ–ಕರ್ನಾಟಕ’ ಹೆಸರಿನಲ್ಲೂ ಹೋರಾಟ ಮುನ್ನಡೆಯುತ್ತಿದೆ.

ಶಿವಮೊಗ್ಗದಲ್ಲಿ ನಡೆಯಲಿರುವ ರೈತ ಮಹಾ ಪಂಚಾಯತ್‌ಗೆ ಎಲ್ಲಾ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಬೆಂಬಲ ನೀಡಿವೆ. ಹೀಗಾಗಿ, ಶಿವಮೊಗ್ಗದ ಈ ಮಹಾ ಪಂಚಾಯತ್ ರೈತ ಚಳವಳಿಗೆ ಹೊಸ ಭಾಷ್ಯವನ್ನೇ ಬರೆಯಲಿದೆ ಎಂಬುದು ಸಂಘಟಕರ ವಿಶ್ವಾಸ.

ADVERTISEMENT

ಈ ಮಹಾ ಪಂಚಾಯತ್‌ನಲ್ಲಿ ಹೋರಾಟಗಾರರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್ ಮತ್ತು ಯುದ್ಧವೀರ ಸಿಂಗ್‌ ಭಾಗವಹಿಸುತ್ತಿರುವುದು ರೈತರ ಈ ಸಂಚಲನಕ್ಕೆ ಕಾರಣವಾಗಿದೆ. ರೈತ ಸಂಘಟನೆಗಳ ವಿಘಟನೆಯಿಂದ ಬೇಸರಗೊಂಡು ಹೋರಾಟಗಳಿಂದ ದೂರ ಉಳಿದಿದ್ದ ಹಲವು ರೈತ ಮುಖಂಡರು ಈ ಮಹಾ ಪಂಚಾಯತ್‌ನಲ್ಲಿ ಭಾಗವಹಿಸಲು ಮುಂದಾಗಿದ್ದಾರೆ ಎಂದು ಶಿವಮೊಗ್ಗ ರೈತ ಮಹಾ ಪಂಚಾಯತ್‌ನ ಮುಖಂಡ ಕೆ.ಎಲ್. ಅಶೋಕ್ ತಿಳಿಸಿದರು.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಚಳವಳಿಯಲ್ಲಿ 25 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ರೈತ ಸಂಘಟನೆಗಳು, ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ಹೋಬಳಿ ಮಟ್ಟದಿಂದ ಗ್ರಾಮ ಮಟ್ಟದ ತನಕ ಈ ಸಂಚಲನ ತಲುಪಿದೆ ಎಂದು ಹೇಳಿದರು.

ರಾಜಕೀಯ ಪಕ್ಷಗಳ ಮುಖಂಡರು ಈ ಹೋರಾಟದಲ್ಲಿ ಭಾಗವಹಿಸಿದರೂ ರೈತ ಸಂಘಟನೆಗಳ ವೇದಿಕೆಯಡಿ ಮಹಾ ಪಂಚಾಯತ್ ನಡೆಯಲಿದೆ. ಯಾವುದೇ ಪಕ್ಷದ ಬ್ಯಾನರ್‌ಗಳು ಬಳಕೆಯಾಗುವುದಿಲ್ಲ. ಸಂಪೂರ್ಣ ಹಸಿರು ಮಯವಾಗಲಿದೆ ಎಂದು ಅವರು ವಿವರಿಸಿದರು.

ಶಿವಮೊಗ್ಗ ಮಾತ್ರವಲ್ಲ; ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಹೊಸ ಉತ್ಸಾಹದಿಂದ ಹೊರಟಿದ್ದಾರೆ. ಮರುದಿನ ಮಾ.21ರಂದು ಹಾವೇರಿಯಲ್ಲೂ ಇದೇ ರೀತಿಯ ಸಮಾವೇಶ ಆಯೋಜನೆಗೊಂಡಿದೆ ಎಂದು ಹೇಳಿದರು.

ಮಾ.22ರಂದು ಬೆಂಗಳೂರಿನಲ್ಲಿ ವಿಧಾನಸೌಧ ಮುತ್ತಿಗೆ ಹಾಕುವ ಹೋರಾಟ ಹಮ್ಮಿಕೊಳ್ಳಲಾಗಿದೆ. ಅಲ್ಲಿಗೂ ರಾಜ್ಯದೆಲ್ಲಡೆಯಿಂದ ರೈತರು ಬರಲಿದ್ದಾರೆ ಎಂದರು.

ಭೂಸುಧಾರಣೆ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ ನೀತಿಗಳು ರೈತರಿಗೆ ಅತ್ಯಂತ ಮಾರಕವಾಗಿವೆ. ಕೇಂದ್ರದ ರೈತ ವಿರೋಧಿ ಕಾಯ್ದೆಗಳನ್ನು ಅಮಾನತಿನಲ್ಲಿ ಇಡುವುದಾಗಿ ಪ್ರಧಾನಿ ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಭೂಸುಧಾರಣೆ ತಿದ್ದುಪಡಿ ಕಾಯ್ದೆ ಬಗ್ಗೆ ಏನನ್ನೂ ಹೇಳದೆ ಮೌನವಾಗಿದ್ದಾರೆ. ಹೀಗಾಗಿ, ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.