ಈಶ್ವರ ಖಂಡ್ರೆ
ವಿಧಾನ ಪರಿಷತ್: ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮೀಸಲಾದ ಅನುದಾನ ಬಳಕೆ ವಿಳಂಬ ತಪ್ಪಿಸಲು ಮುಂದಿನ ವರ್ಷ ಕೈಗೊಳ್ಳುವ ಕಾಮಗಾರಿಗಳಿಗೆ ಈಗಿನಿಂದಲೇ ಕ್ರಿಯಾ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಬಿಜೆಪಿಯ ತಳವಾರ್ ಸಾಬಣ್ಣ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವದ್ವಯರು, 2013ರಿಂದ 23ರವರೆಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ₹10,228 ಕೋಟಿ ನೀಡಲಾಗಿದೆ. ಅದರಲ್ಲಿ ₹8,333 ಕೋಟಿ ವಿನಿಯೋಗಿಸಲಾಗಿದೆ. ಕ್ರಿಯಾ ಯೋಜನೆ, ಅನುಮೋದನೆ, ಟೆಂಡರ್ ಸೇರಿದಂತೆ ವಿವಿಧ ಹಂತಗಳಲ್ಲಿ ವಿಳಂಬದ ಕಾರಣ ಆಯಾ ವರ್ಷದ ಹಣ ಅದೇ ವರ್ಷ ಖರ್ಚಾಗುತ್ತಿಲ್ಲ. ಹಾಗಾಗಿ, ಖರ್ಚಾಗದ ಹಣವನ್ನು ಸರ್ಕಾರ ಮರಳಿ ಪಡೆಯದಂತೆ ನಿಯಮ ರೂಪಿಸಲಾಗಿದೆ ಎಂದರು.
ಹಿಂದಿನ ಸರ್ಕಾರದ ನಿರ್ಲಕ್ಷ್ಯದಿಂದ ಕಳೆದ ವರ್ಷದ ₹2,900 ಕೋಟಿಯಲ್ಲಿ ₹1,584 ಕೋಟಿ ಉಳಿದಿದೆ. ಈ ವರ್ಷದ ₹3 ಸಾವಿರ ಕೋಟಿ ಸೇರಿ ಎಲ್ಲ ಹಣವನ್ನೂ ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಮಂಡಳಿಗೆ ನೀಡುವ ಅನುದಾನದಲ್ಲಿ ಶೇ 25ರಷ್ಟು ಹಣವನ್ನು ಶಿಕ್ಷಣ ನೀಡಲಾಗುವುದು. ರಾಜ್ಯಪಾಲರ ಸೂಚನೆಯಂತೆ ವಿಶ್ವವಿದ್ಯಾಲಯಗಳಿಗೂ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಕಡೆ ಈಗಲೂ ಮಹಿಳೆಯರು ಶೌಚಕ್ಕಾಗಿ ಬಯಲಿಗೆ ಹೋಗುವ ಸ್ಥಿತಿ ಇದೆ. ಅಗತ್ಯ ಶೌಚಾಲಯ ನಿರ್ಮಿಸಬೇಕು. ದಕ್ಷ ಅಧಿಕಾರಿಗಳನ್ನು ನೇಮಿಸಬೇಕು. ಮಂಡಳಿಗೇ ಪ್ರತ್ಯೇಕ ಎಂಜಿನಿಯರ್‌ಗಳ ನೇಮಕ ಮಾಡಿಕೊಳ್ಳಬೇಕು. ಶಾಲೆಗಳಿಗೆ ಅಗತ್ಯವಾದ ಕೊಠಡಿ ನಿರ್ಮಿಸಬೇಕು. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಬಿಜೆಪಿಯ ಎನ್.ರವಿಕುಮಾರ್, ವೈ.ಎಂ.ಸತೀಶ್, ಶಶೀಲ್ ನಮೋಶಿ, ಸುನೀಲ್ ವಲ್ಯಾಪುರೆ, ತೇಜಸ್ವಿನಿ ಗೌಡ, ರಘುನಾಥ್ ರಾವ್ ಮಲ್ಕಾಪುರೆ, ತಿಪ್ಪೇಸ್ವಾಮಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.