ADVERTISEMENT

ತಲಾ ₹1 ಕೋಟಿ ವಿಮೆ: ಕೆನರಾ ಬ್ಯಾಂಕ್‌ ಜೊತೆ ಕೆಕೆಆರ್‌ಟಿಸಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2024, 15:07 IST
Last Updated 3 ಡಿಸೆಂಬರ್ 2024, 15:07 IST
ಕೆನರಾ ಬ್ಯಾಂಕ್‌ ಮತ್ತು ಸಾರಿಗೆ ನಿಗಮದ ಅಧಿಕಾರಿಗಳು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಡಂಬಡಿಕೆ ವಿನಿಮಯ ಮಾಡಿಕೊಂಡರು
ಕೆನರಾ ಬ್ಯಾಂಕ್‌ ಮತ್ತು ಸಾರಿಗೆ ನಿಗಮದ ಅಧಿಕಾರಿಗಳು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಒಡಂಬಡಿಕೆ ವಿನಿಮಯ ಮಾಡಿಕೊಂಡರು   

ಬೆಂಗಳೂರು: ನೌಕರರಿಗೆ ಪ್ರೀಮಿಯಂರಹಿತವಾಗಿ ತಲಾ ₹1 ಕೋಟಿ ಮೊತ್ತದ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಕೆಆರ್‌ಟಿಸಿ) ಕೆನರಾ ಬ್ಯಾಂಕ್‌ ಜೊತೆ ಒಪ್ಪಂದ ಮಾಡಿಕೊಂಡಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಮತ್ತು ಕೆನರಾ ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ವಿಜಯಕುಮಾರ್‌ ಅವರು ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಂಡರು.

‘ನಿಗಮದ ನೌಕರರ ವೇತನ ಖಾತೆಗಳನ್ನು ಕೆನರಾ ಬ್ಯಾಂಕಿನ ‘ಪೇ–ರೋಲ್ ಪ್ಯಾಕೇಜ್‌ ಸ್ಕೀಮ್‌’ ಅಡಿಯಲ್ಲಿ ತೆರೆದು ಈ ವಿಮಾ ಸೌಲಭ್ಯವನ್ನು ಎಲ್ಲ ನೌಕರರು ಶುಲ್ಕರಹಿತವಾಗಿ ಪಡೆದುಕೊಳ್ಳಬಹುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದರು. 

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ‘ನಿಗಮದ ನೌಕರರು ವೈಯಕ್ತಿಕ ಮತ್ತು ಕರ್ತವ್ಯನಿರತ ಸಂದರ್ಭದಲ್ಲಿ ಅಪಘಾತವಾಗಿ ನಿಧನರಾದರೆ ₹ 1 ಕೋಟಿ ಅಪಘಾತ ವಿಮೆಯ ಪರಿಹಾರ ಮೊತ್ತವನ್ನು ನಾಮನಿರ್ದೇಶಿತರಿಗೆ ನೀಡಲಾಗುತ್ತದೆ. ಡೆಬಿಟ್‌ ಕಾರ್ಡ್‌ ಹೊಂದಿದರೆ ₹ 6 ಲಕ್ಷದಿಂದ ₹14 ಲಕ್ಷದವರೆಗೂ ಹಾಗೂ ಪ್ರೀಮಿಯಂರಹಿತವಾಗಿ ₹ 1 ಲಕ್ಷದಿಂದ ₹6 ಲಕ್ಷದವರೆಗೆ ಉಚಿತ ಅವಧಿ ವಿಮೆಯನ್ನು ಪಾಲಿಸಿಯಲ್ಲಿ ನಾಮನಿರ್ದೇಶಿತರಾದವರಿಗೆ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.