ADVERTISEMENT

ಕೆಎಂಎಫ್‌: ಕೋಟಿ ಲೀಟರ್ ದಾಟಿದ ಹಾಲು ಸಂಗ್ರಹ

ಗರಿಷ್ಠ 1.25 ಕೋಟಿ ಲೀಟರ್ ಸಂಗ್ರಹದ ನಿರೀಕ್ಷೆ

ಗಾಣಧಾಳು ಶ್ರೀಕಂಠ
Published 1 ಜೂನ್ 2025, 23:30 IST
Last Updated 1 ಜೂನ್ 2025, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳದಲ್ಲಿ(ಕೆಎಂಎಫ್‌) ನಿತ್ಯದ ಹಾಲು ಸಂಗ್ರಹ ಪ್ರಮಾಣ ಒಂದು ಕೋಟಿ ಲೀಟರ್ ದಾಟಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಕಳೆದ ವರ್ಷ ನಿತ್ಯದ ಹಾಲಿನ ಸಂಗ್ರಹ ಕೋಟಿ ಲೀಟರ್‌ಗೆ ತಲುಪಿತ್ತು. ಈ ವರ್ಷ ಮುಂಗಾರಿನ ಆರಂಭದಲ್ಲೇ ಒಂದು ಕೋಟಿ ಲೀಟರ್ ದಾಟಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಮೇ 24ರಂದು 1.02 ಕೋಟಿ ಲೀಟರ್ ಹಾಲು ಸಂಗ್ರಹವಾಗಿದೆ ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೆಎಂಎಫ್‌ ವ್ಯಾಪ್ತಿಯಲ್ಲಿ 16 ಜಿಲ್ಲಾ ಹಾಲು ಒಕ್ಕೂಟಗಳಿವೆ. 15,840 ಡೇರಿಗಳಿವೆ. 26.89 ಲಕ್ಷ ರೈತರು ಹಾಲು ಪೂರೈಸುತ್ತಾರೆ. ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆಯ ಕಾರಣ ಸಹಜವಾಗಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಡೇರಿಗಳಲ್ಲಿ ನಿತ್ಯದ ಹಾಲಿನ ಸಂಗ್ರಹ ಸರಾಸರಿ 80 ಲಕ್ಷ ಲೀಟರ್‌ನಷ್ಟಿರುತ್ತದೆ. ಕಳೆದ ವರ್ಷ ಇದೇ ದಿನದಂದು 89 ಲಕ್ಷ ಲೀಟರ್ ಹಾಲು ಸಂಗ್ರಹವಾಗಿತ್ತು.

ADVERTISEMENT

ಆದರೆ, ಈ ವರ್ಷ ಫೆಬ್ರುವರಿ ಕೊನೆಯ ವಾರದಿಂದಲೇ ರಾಜ್ಯದ ವಿವಿಧೆಡೆ ತುಂತುರು ಮಳೆ ಶುರುವಾಯಿತು. ವಿಶೇಷವಾಗಿ ಬಯಲು ಸೀಮೆಯ ಕೆಲ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಹೆಚ್ಚು ಸುರಿಯಿತು. ಹಸಿರು ಮೇವಿನ ಲಭ್ಯತೆ ಹೆಚ್ಚಾಗಿ ಹಾಲು ಸಂಗ್ರಹ ಪ್ರಮಾಣವೂ ಶೇಕಡ 12ರಷ್ಟು ಹೆಚ್ಚಳವಾಗಿತ್ತು. ಮೇ ತಿಂಗಳಾಂತ್ಯದವರೆಗೂ ಹಾಲು ಸಂಗ್ರಹ ಹೆಚ್ಚಾಗುತ್ತಲೇ ಇದ್ದು, ಈಗ ಒಂದು ಕೋಟಿ ಲೀಟರ್ ದಾಟಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

‘ಈ ವರ್ಷ ಬೇಸಿಗೆಯಲ್ಲಿ ಉತ್ತಮ ಮಳೆಯಾಯಿತು. ಹಸಿರು ಮೇವು ಸಿಕ್ಕಿತು. ವಾತಾವರಣ ತಂಪಾದ ಕಾರಣ ಹಸುಗಳು ಆರೋಗ್ಯವಾಗಿದ್ದು, ಕಳೆದ ವರ್ಷದ ಬೇಸಿಗೆಗಿಂತ ಸ್ವಲ್ಪ ಹೆಚ್ಚು ಹಾಲು ಕೊಟ್ಟವು. ಈ ಬಾರಿ ಬೇಸಿಗೆಯಲ್ಲಿ ಡೇರಿಗೆ ಹೆಚ್ಚು ಹಾಲು ಹಾಕಿದ್ದೇವೆ’ ಎಂದು ತುಮಕೂರು ಜಿಲ್ಲೆಯ ತೋವಿನಕೆರೆಯ ಹೈನುಗಾರರಾದ ರಾಜೇಶ್ವರಿ ವಿವರಿಸಿದರು.‌

ಮೇ 24 ರಂದು ಬಮೂಲ್‌ನಲ್ಲಿ 18ಲಕ್ಷ ಲೀಟರ್, ಹಾಸನ ಘಟಕದಲ್ಲಿ 14 ಲಕ್ಷ ಲೀಟರ್ ಮತ್ತು ಮಂಡ್ಯ ಘಟಕದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗಿದೆ. ಇವು ಅತಿ ಹೆಚ್ಚು ಹಾಲು ಸಂಗ್ರಹವಾಗಿರುವ ಮೊದಲ ಮೂರು ಜಿಲ್ಲೆಗಳಾಗಿವೆ.

ಹೆಚ್ಚಾದ ಹಾಲನ್ನು ಮೌಲ್ಯವರ್ಧನೆ ಸೇರಿದಂತೆ ವಿವಿಧ ರೀತಿಯಲ್ಲಿ ಸಂಗ್ರಹಿಸಿ ಸಮರ್ಥವಾಗಿ ನಿಭಾಯಿಸಲು ಕೆಎಂಎಫ್ ಸಿದ್ಧತೆ ನಡೆಸಿದೆ. ಸದ್ಯ ನಿತ್ಯ ಸಂಗ್ರಹವಾಗುವ ಕೋಟಿ ಲೀಟರ್‌ ಹಾಲಿನಲ್ಲಿ 75 ಲಕ್ಷ ಲೀಟರ್‌ನಷ್ಟು ಗ್ರಾಹಕರಿಗೆ ಮಾರಾಟವಾಗುತ್ತದೆ.

‘ಸಂಗ್ರಹವಾಗುವ ಹೆಚ್ಚುವರಿ ಹಾಲಿನಿಂದ, ಹಾಲಿನ ಪುಡಿ, ತುಪ್ಪ, ಮೊಸರು ಸೇರಿದಂತೆ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಈ ಮೂಲಕ ಮುಂದಿನ ಬೇಸಿಗೆ ವೇಳೆಗೆ ಕೆಎಂಎಫ್ ಉತ್ಪನ್ನಗಳಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಕೆಎಎಂಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರೋತ್ಸಾಹಧನ ಉತ್ತಮ ಮಳೆಯಿಂದಾಗಿ ಮೇ ತಿಂಗಳಲ್ಲಿ ನಿತ್ಯದ ಹಾಲಿನ ಸಂಗ್ರಹ ಒಂದು ಕೋಟಿ ಲೀಟರ್ ದಾಟಿದೆ. ಈ ವರ್ಷ ಗರಿಷ್ಠ 1.25 ಕೋಟಿ ಲೀಟರ್‌ಗೂ ಹೆಚ್ಚು ಸಂಗ್ರಹವಾಗುವ ನಿರೀಕ್ಷೆ ಇದೆ.
–ಭೀಮಾನಾಯ್ಕ ಅಧ್ಯಕ್ಷ ಕೆಎಂಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.