ADVERTISEMENT

ಹಾಲು ಪ್ರೋತ್ಸಾಹ ಧನ ₹ 400 ಕೋಟಿ ಬಾಕಿ

ಲಾಕ್‌ಡೌನ್‌: ನೆರವಿಗಾಗಿ ಕೇಂದ್ರಕ್ಕೆ ಪತ್ರ ಬರೆದ ಕೆಎಂಎಫ್‌

ಡಿ.ಎಂ.ಕುರ್ಕೆ ಪ್ರಶಾಂತ
Published 17 ಮೇ 2021, 17:43 IST
Last Updated 17 ಮೇ 2021, 17:43 IST
ಕೆಎಂಎಫ್
ಕೆಎಂಎಫ್   

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಕಳೆದ ನಾಲ್ಕು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡಿಲ್ಲ. ಹೈನುಗಾರಿಕೆ ನಂಬಿ ಜೀವನ ನಡೆಸುತ್ತಿರುವ ಬಹಳಷ್ಟು ಕುಟುಂಬಗಳಿಗೆ ಪ್ರೋತ್ಸಾಹ ಧನ ಬಿಡುಗಡೆ ಆಗದಿರುವುದು ಪೆಟ್ಟುಕೊಟ್ಟಿದೆ.

ರಾಜ್ಯದಲ್ಲಿ 9 ಲಕ್ಷ ಉತ್ಪಾದಕರು ನಿತ್ಯ ಸರಾಸರಿ 84 ಲಕ್ಷ ಲೀಟರ್ ಹಾಲನ್ನು ಡೇರಿಗಳಿಗೆ ಪೂರೈಸುತ್ತಾರೆ. ಪ್ರತಿ ಲೀಟರ್ ಹಾಲಿಗೆ ಸರ್ಕಾರ ₹ 5 ಪ್ರೋತ್ಸಾಹ ಧನ ನೀಡುತ್ತಿದೆ. ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌)ದ ಮೂಲಗಳ ಪ್ರಕಾರ ₹ 400 ಕೋಟಿ ಪ್ರೋತ್ಸಾಹ ಧನವನ್ನು ರೈತರಿಗೆ ಸರ್ಕಾರ ಬಿಡುಗಡೆ ಮಾಡಬೇಕಾಗಿದೆ.

‘ಡಿಸೆಂಬರ್‌ವರೆಗೆ ಪ್ರೋತ್ಸಾಹ ಧನ ಪೂರ್ಣ ಬಿಡುಗಡೆಯಾಗಿದೆ. ಜನವರಿಯಿಂದ ಏಪ್ರಿಲ್‌ವರೆಗಿನ ಪ್ರೋತ್ಸಾಹ ಧನದ ಬಿಲ್‌ ಅನ್ನು ಸರ್ಕಾರಕ್ಕೆ ನೀಡಿದ್ದೇವೆ. ಹಣ ಬಿಡುಗಡೆಗೆ ಪತ್ರ ಬರೆದಿದ್ದೇವೆ. ಶೀಘ್ರವೇ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದು ಕರ್ನಾಟಕ ಹಾಲು ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದರು.

ADVERTISEMENT

ಮತ್ತೆ ನೆರವಿಗೆ ಮೊರೆ: ಕೋವಿಡ್‌ ಹೆಚ್ಚಳದಿಂದ ಘೋಷಿಸಿರುವ ಲಾಕ್‌ಡೌನ್ ಬಿಸಿ ಕೆಎಂಎಫ್‌ಗೆ ತೀವ್ರವಾಗಿ ತಟ್ಟುತ್ತಿದೆ. ಈ ಸಂಕಷ್ಟದಿಂದ ಪಾರಾಗಲು ಕಳೆದ ವರ್ಷ ಕೆಎಂಎಫ್ ಕೇಂದ್ರ ಸರ್ಕಾರದಿಂದ ₹ 850 ಕೋಟಿ ಸಾಲ ಪಡೆದಿತ್ತು. ಈ ಬಾರಿಯೂ ಮತ್ತೆ ಸಾಲಕ್ಕಾಗಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

‘ನಿತ್ಯ ಸಂಗ್ರಹವಾಗುವ ಸರಾಸರಿ 84 ಲಕ್ಷ ಲೀಟರ್ ಹಾಲಿನ ಪೈಕಿ 40 ಲಕ್ಷ ಲೀಟರ್ ಹಾಲು ಹಾಗೂ 4 ಲಕ್ಷ ಲೀಟರ್ ಮೊಸರು ಮಾರಾಟವಾಗುತ್ತಿದೆ. 34 ಲಕ್ಷ ಲೀಟರ್ ಪೌಡರ್ ಆಗುತ್ತಿದೆ. ಉಳಿದ ಹಾಲು ಇತರೇ ಉತ್ಪನ್ನಗಳಿಗೆ ಬಳಕೆಯಾಗುತ್ತದೆ. ಕೋವಿಡ್‌ ಎರಡನೇ ಅಲೆಗೂ ಮುನ್ನ 8 ಲಕ್ಷದಿಂದ 10 ಲಕ್ಷ ಲೀಟರ್ ಹಾಲು ಪೌಡರ್‌ಗೆ ಬಳಕೆ ಆಗುತ್ತಿತ್ತು. ಸದ್ಯ 16 ಸಾವಿರ ಟನ್ ಪೌಡರ್ ಗೋದಾಮುಗಳಲ್ಲಿ ದಾಸ್ತಾನಿದೆ’ ಎಂದು ಸತೀಶ್ ಮಾಹಿತಿ ನೀಡಿದರು.

‘ಒಂದು ಕೆ.ಜಿ. ಹಾಲಿನ ಪೌಡರ್‌ ತಯಾರಿಸಲು ₹ 257 ವೆಚ್ಚವಾಗುತ್ತದೆ. ಎಲ್ಲಿಯವರೆಗೆ ಹಾಲಿನ ಪುಡಿ ಅವಶ್ಯಕತೆ ಇರುವುದಿಲ್ಲವೋ ಅಲ್ಲಿಯವರೆಗೆ ಹಣದ ಹರಿವು ಸ್ಥಗಿತವಾಗುತ್ತದೆ. ರೈತರಿಗೆ ಹಣ ಬಟವಾಡೆ ಮಾಡಲು ತೊಂದರೆಯಾಗಬಾರದು ಎಂದು ಕೇಂದ್ರದ ಬಳಿ ಈ ಬಾರಿಯೂ ಸಾಲ ಕೇಳಿದ್ದೇವೆ’ ಎಂದು ಹೇಳಿದರು.

ಹೊರ ರಾಜ್ಯ; ಮಾರಾಟ ಕುಸಿತ

ಲಾಕ್‌ಡೌನ್‌ಗೂ ಪೂರ್ವದಲ್ಲಿ ನಿತ್ಯ 7ರಿಂದ 8 ಲಕ್ಷ ಲೀಟರ್ ಹಾಲನ್ನು ಹೊರರಾಜ್ಯಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಕೇವಲ 70 ಸಾವಿರ ಲೀಟರ್ ಮಾರಾಟವಾಗುತ್ತಿದೆ ಎಂದು ಬಿ.ಸಿ.ಸತೀಶ್ ತಿಳಿಸಿದರು.

ರಾಜ್ಯದಲ್ಲಿನ 1,700 ಹಾಲಿನ ಬೂತ್‌ಗಳನ್ನು ಸಂಜೆಯವರೆಗೂ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಇದು ಅನುಕೂಲವಾಗಿದೆ. ಕರ್ನಾಟಕದ ಒಳಗೆ ವಹಿವಾಟಿಗೆ ಸಮಸ್ಯೆ ಆಗಿಲ್ಲ. ಹೊರ ರಾಜ್ಯಗಳ ಮಾರುಕಟ್ಟೆ ಸ್ಥಗಿತವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.