ADVERTISEMENT

ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆ ದಿಢೀರ್‌ ರದ್ದು

ಕೆಎಂಎಫ್‌ ನಿರ್ದೇಶಕರಿಗೂ ರೆಸಾರ್ಟ್‌ ಭಾಗ್ಯ–ದ್ವೇಷದ ರಾಜಕಾರಣ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2019, 19:26 IST
Last Updated 29 ಜುಲೈ 2019, 19:26 IST
   

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌)ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆಯಬೇಕಿದ್ದ ಚುನಾವಣೆಯನ್ನು ದಿಢೀರ್‌ ರದ್ದುಪಡಿಸಲಾಗಿದೆ. ಇದು ಹಗರಿಬೊಮ್ಮನಹಳ್ಳಿಯ ಕಾಂಗ್ರೆಸ್‌ ಶಾಸಕ ಭೀಮಾ ನಾಯ್ಕ್‌ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಬಿಜೆಪಿಯ ಯೋಜನೆ ಎಂದು ಹೇಳಲಾಗಿದೆ.

‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದ್ವೇಷದ ರಾಜ ಕಾರಣದ ಫಲವಿದು’ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೂ ಆಗಿರುವ ಶಾಸಕ ಎಚ್‌.ಡಿ.ರೇವಣ್ಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

‘ಡೇರಿಗೆ ಒಂದು ಲೀಟರ್‌ ಹಾಲನ್ನೂ ಹಾಕದವರ ಒತ್ತಡ ತಂತ್ರಕ್ಕೆ ಸರ್ಕಾರ ತಲೆಬಾಗಿದೆ. ನಿರ್ದೇಶಕರ ಸಲಹೆ ಪಡೆದು ಕಾನೂನು ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ಕೆಎಂಎಫ್‌ ನಿರ್ದೇಶಕರಲ್ಲಿ ನಾಲ್ವರನ್ನು ರೆಸಾರ್ಟ್‌ನಲ್ಲಿ ಕೂಡಿಟ್ಟು ಮತ ಹಾಕಿಸುವ ಹುನ್ನಾರ ನಡೆದಿದೆ ಎಂದು ದೂರಿರುವಭೀಮಾ ನಾಯ್ಕ್‌, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಸರ್ಕಾರ ವಿಶ್ವಾಸಮತ ಪಡೆಯುತ್ತಿದ್ದಂತೆಯೇ ಚುನಾವಣೆ ಮುಂದೂಡುವ ಆದೇಶವೂ ಹೊರಬಿದ್ದಿದೆ.

ಇದೀಗ ಅನರ್ಹಗೊಂಡಿರುವ ಕಾಂಗ್ರೆಸ್‌ ಶಾಸಕರಮೇಶ್‌ ಜಾರಕಿಹೊಳಿ ಅವರೊಂದಿಗೆ ಗುರುತಿಸಿಕೊಂಡಿದ್ದ ಭೀಮಾ ನಾಯ್ಕ್‌ ಅವರು ಅತೃಪ್ತರ ಗುಂಪನ್ನು ಸೇರದೆ ಇರುವುದಕ್ಕೆ ಅವರಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಮಿಷ ನೀಡಿದ್ದೇ ಕಾರಣ ಎಂದು ಹೇಳಲಾಗಿತ್ತು. ಆದರೆ ಕಾಂಗ್ರೆಸ್‌ ಬೆಂಬಲಿತ ನಿರ್ದೇಶಕರೇ ಜೆಡಿಎಸ್‌ ಅಭ್ಯರ್ಥಿ ರೇವಣ್ಣರತ್ತ ವಾಲಿದ್ದರಿಂದ ಅವರ ನಿರೀಕ್ಷೆಗಳೆಲ್ಲ ತಲೆಕೆಳಗಾಗಿವೆ.

‘ಭೀಮಾ ನಾಯ್ಕ್‌ ಅವರನ್ನು ಬಿಜೆಪಿ ತೆಕ್ಕೆಯೊಳಗೆ ಸೆಳೆದುಕೊಂಡು, ಅವರಿಗೆ ಮತ ಹಾಕುವ ನಿರ್ದೇಶಕರನ್ನೂ ಒಟ್ಟು ಮಾಡಲು ಒಂದಿಷ್ಟು ಸಮಯ ಬೇಕು. ಅದಕ್ಕಾಗಿಯೇ ಚುನಾವಣೆ ದಿಢೀರ್ ಆಗಿ ಮುಂದಕ್ಕೆ ಹೋಗಿದೆ’ ಎಂದು ನಿರ್ದೇಶಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾಮನಿರ್ದೇಶಕರೊಬ್ಬರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು. ತುಮಕೂರು, ಮಂಡ್ಯ ಹಾಲು ಒಕ್ಕೂ ಟಗಳಿಂದ ನಿರ್ದೇಶಕರ ನಿಯೋಜನೆ ಆಗಿರಲಿಲ್ಲ. ಆದರೂ ಈ ಬಾರಿ 15 ಮಂದಿ ಮತ ಚಲಾಯಿಸುವ ಅಧಿಕಾರ ಹೊಂದಿದ್ದರು. ಕೊನೆಯ ಹಂತದಲ್ಲಿ ಚುನಾವಣೆ ರದ್ದಾಗಿದೆ’ ಎಂದು ಶಾಸಕ ಡಿ.ಕೆ.ಶಿವಕುಮಾರ್‌ ಅವರಿಗೆ ನಿಷ್ಠರಾದ ಇನ್ನೊಬ್ಬ ನಿರ್ದೇಶಕರು ಹೇಳಿದರು.

18 ಮಂದಿಗೆ ಮತ ಹಕ್ಕು

ಕೆಎಂಎಫ್‌ನಲ್ಲಿ 12 ಮಂದಿ ನಿರ್ದೇಶಕರು, ಒಬ್ಬರು ಸರ್ಕಾರಿ ನಾಮ ನಿರ್ದೇಶಿತರು, ಎನ್‌ಡಿಡಿಬಿಯ ಇಬ್ಬರು ಪ್ರತಿನಿಧಿಗಳು ಹಾಗೂ ಮೂವರು ಅಧಿಕಾರಿಗಳು ಸೇರಿ ಒಟ್ಟು 18 ಮಂದಿಗೆ ಮತ ಚಲಾಯಿಸುವ ಹಕ್ಕು ಇದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.