ADVERTISEMENT

ಕೆಎಂಎಫ್‌: ಹೈಕೋರ್ಟ್‌ ಮೆಟ್ಟಿಲೇರಿದ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 30 ಜುಲೈ 2019, 20:09 IST
Last Updated 30 ಜುಲೈ 2019, 20:09 IST
   

ಬೆಂಗಳೂರು: ‘ನಾನು ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌) ಅಧ್ಯಕ್ಷನಾಗಿ ಆಯ್ಕೆ ಆಗುವುದನ್ನು ತಪ್ಪಿಸುವ ದುರುದ್ದೇಶದಿಂದ ಅಧ್ಯಕ್ಷ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ ಮುಂದೂಡಲು ರಾಜ್ಯ ಸರ್ಕಾರ ಆದೇಶಿಸಿದೆ’ ಎಂದು ಆಕ್ಷೇಪಿಸಿ ಶಾಸಕ ಎಚ್.ಡಿ.ರೇವಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ರೇವಣ್ಣ ಸೇರಿದಂತೆ ರಾಜ್ಯದ ವಿವಿಧೆಡೆಯ ಹಾಲು ಉತ್ಪಾದಕ ಸಹಕಾರ ಸಂಘಗಳ ಒಟ್ಟು ಎಂಟು ಜನ ಪ್ರತಿನಿಧಿಗಳು ಈ ಕುರಿತಂತೆ ಮಂಗಳವಾರ ರಿಟ್‌ ಅರ್ಜಿ ದಾಖಲಿಸಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಪ್ರಕರಣದಲ್ಲಿ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೆಎಂಎಫ್‌ ಚುನಾವಣಾಧಿಕಾರಿ ಸೇರಿ 6 ಜನರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

‘ಚುನಾವಣೆ ಮುಂದೂಡಲು ಆದೇಶಿಸಿರುವ ಸಹಕಾರ ಇಲಾಖೆ ಇದಕ್ಕೆ ಸೂಕ್ತ ಕಾರಣ ನೀಡಿಲ್ಲ. ಒಮ್ಮೆ ವೇಳಾಪಟ್ಟಿ ಘೋಷಣೆಯಾದ ಮೇಲೆ ಚುನಾವಣೆ ಮುಂದೂಡುವುದು ಕಾನೂನು ಬಾಹಿರ. ಆದ್ದರಿಂದ ಯಾವ ಹಂತದಲ್ಲಿ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದೆಯೋ ಆ ಹಂತದಿಂದಲೇ ಚುನಾವಣೆ ನಡೆಯುವಂತೆ ನಿರ್ದೇಶಿಸಬೇಕು. ಮುಂದೂಡಿಕೆಗಾಗಿ ಜುಲೈ 29ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.