ADVERTISEMENT

ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಎಂಎಫ್‌ನಿಂದ ಅರಿಶಿನ ಮಿಶ್ರಿತ ಹಾಲು

ಸೋಮವಾರ ಬಿಡುಗಡೆ: ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 31 ಮೇ 2020, 14:36 IST
Last Updated 31 ಮೇ 2020, 14:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ವೈರಸ್ ಸಾಂಕ್ರಾಮಿಕ ಹರಡುತ್ತಿರುವ ಈ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯ ವೃದ್ಧಿಗಾಗಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಅರಿಶಿನ ಮಿಶ್ರಿತ ನಂದಿನಿ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಹಾಲು ಒಕ್ಕೂಟ ಮಂಡಳಿಯ (ಕೆಎಂಎಫ್‌) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ವಿಶ್ವ ಹಾಲು ದಿನವಾಗಿ ಆಚರಿಸಲಾಗುತ್ತಿರುವ ಜೂನ್ 1ರಂದು ಅರಿಶಿನ ಮಿಶ್ರಿತ ನಂದಿನಿ ಹಾಲು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬಾಲಚಂದ್ರ ಜಾರಕಿಹೊಳಿ, ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಜನರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲಿ ಎಂಬ ಕಾರಣಕ್ಕೆ ಕೆಎಂಎಫ್ ಅರಿಶಿನಯುಕ್ತ ಹಾಲನ್ನು ಬಿಡುಗಡೆಗೊಳಿಸುತ್ತಿದೆ ಎಂದು ಹೇಳಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಕೆಎಂಎಫ್‌ನ ನಾನಾ ಶ್ರೇಣಿಯ ನಂದಿನಿ ಉತ್ಪಾದನೆಯ ಮೊಬೈಲ್ ಪಾರ್ಲರ್ ವ್ಯಾನ್‌ಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ. ಇಲ್ಲಿ ಕೆಎಂಎಫ್ ತಯಾರಿಸುತ್ತಿರುವ ನಂದಿನಿ ಹಾಲು, ಮೊಸರು, ಐಸ್ ಕ್ರೀಂ, ಗಟ್ಟಿಹಾಲು ಸೇರಿದಂತೆ ಇತರೆ ಉತ್ಪನ್ನಗಳು ಗ್ರಾಹಕರಿಗೆ ಲಭ್ಯವಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಗ್ರಾಹಕರ ಲಭ್ಯತೆ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಲ್ಲಿಯೂ ನಂದಿನಿ ಮೊಬೈಲ್ ಪಾರ್ಲರ್ ವ್ಯಾನ್‌ಗಳನ್ನು ವಿಸ್ತರಿಸುವ ಚಿಂತನೆ ಕೆಎಂಎಫ್‌ನದ್ದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿಶ್ವ ಹಾಲು ದಿನವನ್ನು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು 2001ರಿಂದ ಪ್ರತಿವರ್ಷ ಜೂನ್ 1ರಂದು ಆಚರಿಸಿಕೊಂಡು ಬರುತ್ತಿದೆ. ವಿಶ್ವದೆಲ್ಲೆಡೆ ಹಾಲು, ಹೈನುಗಾರಿಕೆ, ಜತೆಗೆ ಅದರ ಮಹತ್ವವನ್ನು ಪಸರಿಸುವುದೇ ಇದರ ಉದ್ದೇಶ ಆಗಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಕೂಡ ಜನಸ್ನೇಹಿಯಾಗಿ ಇಂತಹ ಕಾರ್ಯವನ್ನು ಮಾಡುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕ ಸೇರಿದಂತೆ ವಿಶ್ವದ ನೂರು ಕೋಟಿಗೂ ಅಧಿಕ ಜನರು ಹೈನುಗಾರಿಕೆಯಿಂದಲೇ ತಮ್ಮ ಬದುಕು ಕಂಡುಕೊಂಡಿದ್ದಾರೆ. ಈಗಲೂ ಅದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ನಿತ್ಯ ಪ್ರಪಂಚದಾದ್ಯಂತ ಕನಿಷ್ಠ 600 ಕೋಟಿ ಜನರು ಹಾಲಿನ ವಿವಿಧ ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಹಾಲು ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ ಎಂದು ಅವರು ಹೇಳಿದ್ದಾರೆ.

ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ಹಿಂದಿನ ಕಾಲದಿಂದಲೂ ಹಾಲಿಗೆ ವಿಶೇಷ ಸ್ಥಾನಮಾನವಿದೆ. ಹಾಲಿನ ಸೇವನೆಯಿಂದಾಗಿ ಸಾಕಷ್ಟು ಜನರು ಆರೋಗ್ಯಯುತವಾದ ಬದುಕನ್ನು ನಡೆಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ಕೆಎಂಎಫ್ ಪರವಾಗಿ ಹಾಲು ದಿನಾಚರಣೆ ಶುಭಾಶಯಗಳು ಎಂದು ಅವರು ಶುಭ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.