ADVERTISEMENT

K.N. Rajanna | ರಾಜಣ್ಣ ಪರ ಬಿಜೆಪಿ ಸ್ವರ: ಉಭಯ ಸದನಗಳ ಒಳಗೆ, ಹೊರಗೆ ಭಾರಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 22:52 IST
Last Updated 12 ಆಗಸ್ಟ್ 2025, 22:52 IST
<div class="paragraphs"><p>ಕೆ.ಎನ್. ರಾಜಣ್ಣ</p></div>

ಕೆ.ಎನ್. ರಾಜಣ್ಣ

   

ಬೆಂಗಳೂರು: ವಿಧಾನಮಂಡಲ ಅಧಿವೇಶನದ ಹೊತ್ತಿನಲ್ಲಿಯೇ ಕೆ.ಎನ್‌. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವ ಕ್ರಮ ಉಭಯ ಸದನಗಳ ಒಳಗೆ ಮತ್ತು ಹೊರಗೆ ಭಾರಿ ಚರ್ಚೆಗೆ ಕಾರಣವಾಗಿದೆ.

ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು ಈ ವಿಚಾರ ಪ್ರಸ್ತಾಪಿಸಿ, ಹೇಳಿಕೆ ನೀಡುವಂತೆ ಪಟ್ಟು ಹಿಡಿದರೂ ಸರ್ಕಾರ ಉತ್ತರ ನೀಡಲಿಲ್ಲ. ವಜಾ ಆದ ಬಳಿಕ ರಾಜಣ್ಣ ಅವರು, ಮಂಗಳವಾರ ಕಲಾಪಕ್ಕೆ ಹಾಜರಾಗಲಿಲ್ಲ.

ADVERTISEMENT

ವಿಧಾನಸಭೆ ಕಲಾಪ ಮಂಗಳವಾರ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ, ‘ಸದನ ನಡೆಯುತ್ತಿರುವಾಗ ಮಂತ್ರಿಯೊಬ್ಬರ ವಜಾ ಆಗಿದ್ದು, ಸದನದಲ್ಲಿ ಹೇಳಿಕೆ ನೀಡಬೇಕು’ ಎಂದು ಪಟ್ಟುಹಿಡಿದರು. 

‘ನನ್ನ ವಜಾ ಹಿಂದೆ ಷಡ್ಯಂತ್ರವಿದೆ ಎಂದು ರಾಜಣ್ಣ ಹೇಳಿದ್ದಾರೆ. ಅವರು ರಾಜೀನಾಮೆ ಕೊಟ್ಟರೂ ಅಂಗೀಕರಿಸದೆ ವಜಾ ಮಾಡಲಾಗಿದೆ. ಸತ್ಯ ಹೇಳಿದ್ದಕ್ಕೆ ವಜಾ ಮಾಡಲಾಗಿದೆಯೇ’ ಎಂದೂ ಪ್ರಶ್ನಿಸಿದರು. ‘ಈ ವಿಚಾರದಲ್ಲಿ ಸದನವನ್ನು ಕತ್ತಲಲ್ಲಿ ಇಡಬೇಡಿ’ ಎಂದು ಬಿಜೆಪಿಯ ಎಸ್‌. ಸುರೇಶ್ ಕುಮಾರ್, ವಿ. ಸುನಿಲ್‌ ಕುಮಾರ್‌ ಸೇರಿದಂತೆ ಇತರೆ ಸದಸ್ಯರು ದನಿಗೂಡಿಸಿದರು.

ಆಗ ಕಾನೂನು ಸಚಿವ, ‘ಪ್ರಶ್ನೋತ್ತರ ಅವಧಿ ಮುಗಿದ ತಕ್ಷಣ ಉತ್ತರ ನೀಡುತ್ತೇನೆ’ ಎಂದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಬಂದರಾದರೂ ವಿರೋಧ ಪಕ್ಷಗಳ ಆಗ್ರಹಕ್ಕೆ ಉತ್ತರ ನೀಡಲಿಲ್ಲ.

ಶೂನ್ಯ ವೇಳೆಯ ಬಳಿಕ ಎಚ್.ಕೆ. ಪಾಟೀಲ, ‘ರಾಜಣ್ಣ ಅವರು ಸಚಿವ ಸಂಪುಟದಿಂದ ನಿರ್ಗಮಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆಯನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ’ ಎಂದರು. ಆಗ ಸುರೇಶ್ ಕುಮಾರ್ ಮತ್ತಿತರರು, ‘ಮುಖ್ಯಮಂತ್ರಿ ಸದನದಲ್ಲಿದ್ದಾರೆ. ಖುದ್ದು ಅವರೇ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

ಅಧಿಸೂಚನೆ ಮಂಡಿಸಿದ ಎಚ್.ಕೆ. ಪಾಟೀಲ, ‘ಈ ರೀತಿಯ ಪ್ರಕರಣದಲ್ಲಿ ಸಂಪುಟದಿಂದ ಹೊರಹೋದವರು ಖುದ್ದಾಗಿ ಸದನದಲ್ಲಿ ಹೇಳಿಕೆ ನೀಡಲು ಅವಕಾಶವಿರುತ್ತದೆ; ಅದು ಕೂಡ ಸಭಾಧ್ಯಕ್ಷರ ಸೂಚನೆ ಮೇರೆಗೆ. ಆ ಭಾಗದಲ್ಲೂ ಹಿಂದೆ ಸಚಿವರಾಗಿದ್ದ 10-12 ಮಂದಿ ರಾಜೀನಾಮೆ ನೀಡಿದ್ದಾರೆ. ಸಂಪುಟದಿಂದ ತೆಗೆದು ಹಾಕಿಸಿಕೊಂಡಿದ್ದಾರೆ. ಅದು ಎಲ್ಲಿಯೂ ಚರ್ಚೆ ಆಗಿಲ್ಲ. ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದಾರೆ. ಅದರ ಬಗ್ಗೆಯೂ ಚರ್ಚೆ ಆಗಿಲ್ಲ’ ಎಂದರು.

ಆಗ, ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮತ್ತು ಆರಗ ಜ್ಞಾನೇಂದ್ರ ಸಚಿವರ ಜೊತೆ ವಾಗ್ವಾದಕ್ಕೆ ಮುಂದಾದರು.  ‘ಬಿಜೆಪಿಯಿಂದ ಬಸನಗೌಡ ಪಾಟೀಲ ಯತ್ನಾಳರನ್ನು ಯಾವ ಕಾರಣಕ್ಕೆ ಕೈ ಬಿಡಲಾಯಿತು. ಸತ್ಯ ಹೇಳಿದರು ಎಂದು ಉಚ್ಚಾಟಿಸಲಾಗಿದೆಯೇ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

‘ಯತ್ನಾಳರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ರಾಜಣ್ಣ ವಜಾ ಸಾರ್ವಜನಿಕ ವಿಚಾರ. ಅದರ ಬಗ್ಗೆ ಸರ್ಕಾರ ಉತ್ತರ ನೀಡಬೇಕು’ ಎಂದು ಸುನಿಲ್ ಕುಮಾರ್ ಆಗ್ರಹಿಸಿದರು.

‘ರಾಜಣ್ಣ ಅವರನ್ನು ಸಂಪುಟದಿಂದ ದಿಢೀರ್‌ ವಜಾಗೊಳಿಸಿದ ಖಚಿತ ಕಾರಣವನ್ನು ಸದನಕ್ಕೆ ತಿಳಿಸಬೇಕು’ ಎಂದು ವಿಧಾನಪರಿಷತ್‌ನಲ್ಲೂ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

‘ದ್ವೇಷ ಇದ್ದಿದ್ದೆ, ಹುಷಾರಾಗಿರಬೇಕು’

ರಾಜಕೀಯದಲ್ಲಿ ದ್ವೇಷ ಇದ್ದೇ ಇರುತ್ತದೆ. ನಾವು ಹುಷಾರಾಗಿ, ಬಿಗಿಯಾಗಿ ಇರಬೇಕು. ರಾಜಣ್ಣ ವಜಾ ಹೈಕಮಾಂಡ್ ನಿರ್ಧಾರ. ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು. ಆಗ ಈ ರೀತಿ ಆಗುವುದಿಲ್ಲ. ಪಕ್ಷದ ನಿರ್ಧಾರದ ವಿರುದ್ಧ ಹೋಗಲು ಆಗುವುದಿಲ್ಲವೆಂದು ಮುಖ್ಯಮಂತ್ರಿ ಕೂಡಾ ಹೇಳಿದ್ದಾರೆ

-ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ

‘ರಾಜಕಾರಣದಲ್ಲಿ ಷಡ್ಯಂತ್ರ ಸಹಜ’

ರಾಜಕೀಯದಲ್ಲಿ ಷಡ್ಯಂತ್ರ ಸಾಮಾನ್ಯ. ರಾಜಕಾರಣಿಗಳು ಅದನ್ನು ಎದುರಿಸಬೇಕಾಗುತ್ತದೆ. ರಾಜಣ್ಣ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆಯೋ ಇಲ್ಲವೋ ಎಂಬುದು ಭವಿಷ್ಯದಲ್ಲಿ ಗೊತ್ತಾಗುತ್ತದೆ. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡುವ ಮೂಲಕ ಪಕ್ಷದ ಶಿಸ್ತನ್ನು ಪಾಲಿಸಬೇಕು ಎಂಬ ಬಲವಾದ ಸಂದೇಶವನ್ನು ಎಲ್ಲರಿಗೂ ಪಕ್ಷ ರವಾನಿಸಿದೆ

-ಬಿ.ಕೆ. ಹರಿಪ್ರಸಾದ್‌, ವಿಧಾನ ಪರಿಷತ್‌ ಕಾಂಗ್ರೆಸ್‌ ಸದಸ್ಯ 

ಆತ್ಮಹತ್ಯೆಗೆ ಯತ್ನ
ಮಧುಗಿರಿ: ರಾಜಣ್ಣ ಅವರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು, ಅಭಿಮಾನಿಗಳು ಮಂಗಳವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು. ಮೂವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ರಾಜಣ್ಣ ಅಭಿಮಾನಿ ಶಿವಲಿಂಗ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿದ್ದ ವರು ತಡೆದರು. ಸೋಂಪುರ ರಂಗನಾಥ್, ಸಿದ್ದಾಪುರ ರಂಗಶಾಮಣ್ಣ ಎಂಬುವರು ವಿಷದ ಬಾಟಲಿ ಹಿಡಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು.

ಪಟ್ಟಣದ ಎಂ.ಎನ್.ಕೆ ಸಮುದಾಯ ಭವನದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ರಾಜಣ್ಣ ಅಭಿಮಾನಿಗಳು ಸೇರಿದ್ದರು. ಮತ್ತೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ ಬೆಂಬಲಿಗರು, ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು.

ಪರಿಷತ್‌ನಲ್ಲೂ ಪಟ್ಟು

‘ರಾಜಣ್ಣ ಅವರನ್ನು ಸಂಪುಟದಿಂದ ದಿಢೀರ್‌ ವಜಾಗೊಳಿಸಿದ ಖಚಿತ ಕಾರಣವನ್ನು ಸದನಕ್ಕೆ ತಿಳಿಸಬೇಕು’ ಎಂದು ವಿಧಾನಪರಿಷತ್‌ನಲ್ಲೂ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು.

ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಿ.ಟಿ. ರವಿ, ಎಚ್‌. ವಿಶ್ವನಾಥ್‌ ಮತ್ತಿತರರು ಮಾತನಾಡಿ, ‘ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಜಣ್ಣ ಅವರನ್ನು ಸಂಪುಟದಿಂದ ಕಿತ್ತುಹಾಕಿರುವುದಕ್ಕೆ ಕಾರಣವನ್ನು ರಾಜ್ಯದ ಜನರಿಗೆ ತಿಳಿಸಬೇಕು’ ಎಂದು ಒತ್ತಾಯಿಸಿದರು.

ಸಚಿವ ಎಂ.ಬಿ. ಪಾಟೀಲ ಅವರು, ‘ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ರಾಜೀನಾಮೆ ಅಸಲಿಯತ್ತು ಹೇಳಿ? ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿದಾಗ ಪರಿಶಿಷ್ಟ ಜಾತಿ ಸಚಿವ ಎನ್ನುವ ವಿಚಾರ ಗೊತ್ತಿರಲಿಲ್ಲವೇ’ ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.