ADVERTISEMENT

ಸವಿತಾ ಸಮುದಾಯದ ಆಕ್ಷೇಪಾರ್ಹ ಪದಬಳಕೆ: ರಾಜಣ್ಣ ಕ್ಷಮೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 15:46 IST
Last Updated 19 ಡಿಸೆಂಬರ್ 2025, 15:46 IST
ಕೆ.ಎನ್. ರಾಜಣ್ಣ
ಕೆ.ಎನ್. ರಾಜಣ್ಣ   

ಬೆಂಗಳೂರು: ‘ಶಾಸಕ ಕೆ.ಎನ್. ರಾಜಣ್ಣ ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಸವಿತಾ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು’ ಎಂದು ರಾಜ್ಯ ಸವಿತಾ ಸಮುದಾಯದ ಕಾರ್ಯಾಧ್ಯಕ್ಷ ಬೈಲಪ್ಪ ನಾರಾಯಣ ಸ್ವಾಮಿ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಶಾಸಕರು ಬಳಸಿದ ಪದದಿಂದಾಗಿ ನಮ್ಮ ಸಮುದಾಯಕ್ಕೆ ನೋವುಂಟಾಗಿದೆ. ರಾಜಣ್ಣ ಅವರ ಹೇಳಿಕೆಯನ್ನು ವಾಹಿನಿಯವರು ಪ್ರಶ್ನಿಸಬಹುದಿತ್ತು. ಅಲ್ಲದೇ ಆ ನಿರ್ದಿಷ್ಟ ತುಣುಕು ಪ್ರಸಾರವಾಗದಂತೆ ಎಚ್ಚರ ವಹಿಸಬೇಕಿತ್ತು’  ಎಂದು ಹೇಳಿದರು.

ಪ್ರಧಾನ ಕಾರ್ಯದರ್ಶಿ ಕೆ. ಬಾಲಕೃಷ್ಣ ಮಾತನಾಡಿ, ‘ಇದೇ ರೀತಿ ಹಿಂದೆ ಆಕ್ಷೇಪಾರ್ಹ ಪದ ಬಳಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ವಿರುದ್ಧ ಪ್ರತಿಭಟಿಸಿದ್ದೆವು. ಸಾರ್ವಜನಿಕರು ಆ ಪದವನ್ನು ಬೈಗುಳವಾಗಿ ಬಳಸಬಾರದು’ ಎಂದು ತಿಳಿಸಿದರು.

ADVERTISEMENT

‘ಕರ್ನಾಟಕ ದ್ವೇಷ ಭಾಷಣ ಮತ್ತು ಅಪರಾಧ(ತಡೆ) ಮಸೂದೆ 2025’ ಜಾರಿಗೆ ಬಂದರೆ ಇಂಥ ಆಕ್ಷೇಪಾರ್ಹ ಪದ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗಲಿದೆ. ಸವಿತಾ ಸಮಾಜದವರು ಈ ಕಾಯ್ದೆ ಬಳಸಿ, ದೂರು ಸಲ್ಲಿಸಬೇಕು’ ಎಂದು ಸಮುದಾಯದ ನಾಯಕಿ ನಾಗವೇಣಿ ತಿಳಿಸಿದರು.

ಸವಿತಾ ಸಮಾಜದ ಮುಖಂಡರಾದ ವೇಣುಗೋಪಾಲ್, ರಾಘವೇಂದ್ರ, ಕೌಶಿಕ್ ಮತ್ತು ಜಿ.ಆರ್. ಅಭೀಷೇಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.