ADVERTISEMENT

ಪುನರ್ವಸತಿಗೆ ಜಮೀನು ಖರೀದಿಸಲು ಸೂಚನೆ

ಜಂಬೂರಿನಲ್ಲಿ ಸಚಿವ ಎಸ್‌.ಸುರೇಶ್‌ ಕುಮಾರ್ ಭರವಸೆ,

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 12:51 IST
Last Updated 22 ಆಗಸ್ಟ್ 2019, 12:51 IST
ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳನ್ನು ಸಚಿವ ಸುರೇಶ್‌ ಕುಮಾರ್‌ ಪರಿಶೀಲಿಸಿದರು
ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿಯಲ್ಲಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳನ್ನು ಸಚಿವ ಸುರೇಶ್‌ ಕುಮಾರ್‌ ಪರಿಶೀಲಿಸಿದರು   

ಮಡಿಕೇರಿ: ಈ ವರ್ಷವೂ ಕೊಡಗಿನಲ್ಲಿ ನೆರೆಯಿಂದ ಹಾನಿ ಸಂಭವಿಸಿದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಸ್ಥಳದಲ್ಲಿಯೇ ಪುನರ್ವಸತಿ ಕಲ್ಪಿಸಲಾಗುವುದು ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ಭರವಸೆ ನೀಡಿದರು.

ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸಮೀಪದ ಜಂಬೂರಿನಲ್ಲಿ 2018ರ ಭೂಕುಸಿತದ ಸಂತ್ರಸ್ತರಿಗೆ ನಿರ್ಮಿಸುತ್ತಿರುವ ಮನೆಗಳನ್ನು ಗುರುವಾರ ವೀಕ್ಷಿಸಿದ ನಂತರ ಮಾತನಾಡಿದರು.

ಪುನರ್ವಸತಿಗೆ ಜಮೀನು ದಾನ ನೀಡಿದರೆ ಅದನ್ನೂ ಜಿಲ್ಲಾಡಳಿತ ಸ್ವೀಕರಿಸಲಿದೆ. ಜತೆಗೆ, ಸರ್ಕಾರಿ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಖಾಸಗಿಯವರು ಜಾಗ ನೀಡಿದರೂ ಅದನ್ನೂ ಖರೀದಿಸಿ ಸೂಕ್ತ ಸ್ಥಳದಲ್ಲಿ ಪುನರ್ಸವತಿ ಕಲ್ಪಿಸಲಾಗುವುದು. ಕರ್ಣಂಗೇರಿಯಲ್ಲಿ 35 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ದಿನಾಂಕ ನೋಡಿಕೊಂಡು ಮನೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಹೇಳಿದರು.

ಜಂಬೂರಿನಲ್ಲಿ 350 ಮನೆಗಳನ್ನು ಸರ್ಕಾರದಿಂದ ನಿರ್ಮಿಸಲಾಗುತ್ತಿದೆ. 200 ಮನೆಗಳನ್ನು ಇನ್ಫೊಸಿಸ್‌ ಪ್ರತಿಷ್ಠಾನದಿಂದ ಕಟ್ಟಿ ಕೊಡಲಾಗುತ್ತಿದೆ. ಕಳೆದ ಜ.14ರಂದು ಕಾಮಗಾರಿ ಆರಂಭಿಸಲಾಗಿದೆ. ಎಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದೂ ಕಷ್ಟ. ಹೊಸ ತಂತ್ರಜ್ಞಾನ ಬಳಸಿ ಕಾಮಗಾರಿ ನಡೆಸುತ್ತಿರುವ ಕಾರಣ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಮನೆಗಳನ್ನು ಹಸ್ತಾಂತರ ಮಾಡಲು ಸಾಧ್ಯವಿತ್ತು ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.