ADVERTISEMENT

ಆಮ್‌ ಆದ್ಮಿ ಪಕ್ಷ ರೈತ ಸಂಘದ ರಾಜಕೀಯ ಮುಖವಾಣಿ: ಕೋಡಿಹಳ್ಳಿ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 11:15 IST
Last Updated 21 ಏಪ್ರಿಲ್ 2022, 11:15 IST
ಕೋಡಿಹಳ್ಳಿ ಚಂದ್ರಶೇಖರ್‌
ಕೋಡಿಹಳ್ಳಿ ಚಂದ್ರಶೇಖರ್‌   

ಬೆಂಗಳೂರು: ‘ಆಮ್‌ ಆದ್ಮಿ ಪಕ್ಷ ರೈತ ಸಂಘದ ರಾಜಕೀಯ ಮುಖವಾಣಿಯಾಗಲಿದೆ. 2023ರ ವಿಧಾನಸಭೆ ಚುನಾವಣೆಯನ್ನು ಆಮ್‌ ಆದ್ಮಿ ಪಕ್ಷದ ಜತೆ ಕೈಜೋಡಿಸಿ ಎದುರಿಸಲಾಗುವುದು’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ನಗರದ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತರ ಬೃಹತ್‌ ಸಮಾವೇಶದಲ್ಲಿ ಈ ನಿರ್ಧಾರ ಪ್ರಕಟಿಸಿದ ಅವರು, ‘ನಮ್ಮ ಚುನಾವಣೆ ಅಸ್ತ್ರ ಪೊರಕೆ. ರೈತ ಸಂಘವು ಸ್ವತಂತ್ರವಾಗಿದ್ದುಕೊಂಡು ಕರ್ನಾಟಕದಲ್ಲಿ ಆಮ್‌ ಆದ್ಮಿ ಪಕ್ಷದ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಶ್ರಮಿಸಲಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಮೂರು ರಾಜಕೀಯ ಪಕ್ಷಗಳಿಗೆ ಪರ್ಯಾಯವಾಗಿ ಶುದ್ಧ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್‌ ಆದ್ಮಿ ಪಕ್ಷವನ್ನು ಸಂಪೂರ್ಣ ಬೆಂಬಲಿಸುವುದು ಅಗತ್ಯ ಮತ್ತು ಅನಿವಾರ್ಯವಾಗಿದೆ. ಹೀಗಾಗಿ, ರೈತ ಸಂಘದ ಕಾರ್ಯಕರ್ತರು ದಿನದ 24 ಗಂಟೆಯೂ ಶ್ರಮಿಸಬೇಕು. ವಿಧಾನಸೌಧವನ್ನು ಶುದ್ಧೀಕರಿಸಲು ಬದಲಾವಣೆ ಅಗತ್ಯ’ ಎಂದು ಹೇಳಿದರು.

ADVERTISEMENT

‘ಎಲ್ಲ ರಾಜಕೀಯ ಪಕ್ಷಗಳ ಉಸಿರಾಟವೇ ಭ್ರಷ್ಟಾಚಾರವಾಗಿದೆ. ಲೂಟಿ ಮಾಡುವುದನ್ನೇ ಮೈಗೂಡಿಸಿಕೊಂಡಿವೆ. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳು ಭ್ರಷ್ಟಾಚಾರ ಮುಕ್ತವಾಗಿವೆಯೇ? ಇಂತಹ ಒಂದಾದರೂ ಉದಾಹರಣೆ ನೀಡಲಿ. ಕರ್ನಾಟಕದಲ್ಲಿ ಶೇ 40 ಕಮಿಷನ್‌ ಪಡೆಯುವುದೇ ಸಾಧನೆಯಾಗಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.