ADVERTISEMENT

ಕೋಗಿಲು ಪ್ರಕರಣ ಎನ್‌ಐಎಗೆ ವಹಿಸಲು ಬಿಜೆಪಿ ಒತ್ತಾಯ: ವಿಜಯೇಂದ್ರಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 15:46 IST
Last Updated 12 ಜನವರಿ 2026, 15:46 IST
ಶಾಸಕ ಎಸ್‌.ಆರ್.ವಿಶ್ವನಾಥ್‌ ನೇತೃತ್ವದ ಸತ್ಯಶೋಧನಾ ತಂಡ ಕೋಗಿಲು ಬಡಾವಣೆಯ ಅಕ್ರಮ ಮನೆಗಳ ತೆರವು ಕುರಿತ ವರದಿಯನ್ನು ಬಿಡುಗಡೆಗೊಳಿಸಿತು. ತಂಡದ ಸದಸ್ಯರಾದ ಎಸ್‌.ಹರೀಶ್‌, ಮಾಳವಿಕಾ ಅವಿನಾಶ್‌,  ಎಸ್.ಮುನಿರಾಜು, ಎಚ್‌.ಸಿ.ತಮ್ಮೇಗೌಡ, ಭಾಸ್ಕರ್‌ ರಾವ್‌ ಇದ್ದರು.
ಶಾಸಕ ಎಸ್‌.ಆರ್.ವಿಶ್ವನಾಥ್‌ ನೇತೃತ್ವದ ಸತ್ಯಶೋಧನಾ ತಂಡ ಕೋಗಿಲು ಬಡಾವಣೆಯ ಅಕ್ರಮ ಮನೆಗಳ ತೆರವು ಕುರಿತ ವರದಿಯನ್ನು ಬಿಡುಗಡೆಗೊಳಿಸಿತು. ತಂಡದ ಸದಸ್ಯರಾದ ಎಸ್‌.ಹರೀಶ್‌, ಮಾಳವಿಕಾ ಅವಿನಾಶ್‌,  ಎಸ್.ಮುನಿರಾಜು, ಎಚ್‌.ಸಿ.ತಮ್ಮೇಗೌಡ, ಭಾಸ್ಕರ್‌ ರಾವ್‌ ಇದ್ದರು.    

ಬೆಂಗಳೂರು: ‘ಕೋಗಿಲು ಬಡಾವಣೆಯಲ್ಲಿ ತೆರವುಗೊಂಡಿರುವ ಅಕ್ರಮವಾಸಿಗಳ ಪೈಕಿ ಒಬ್ಬರೂ ಕೇರಳದವರಿಲ್ಲ.  ಬಹುಪಾಲು ಜನ ಮುಸ್ಲಿಮರೇ ಆಗಿದ್ದು, ಕೇರಳದ ಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್‌ನ ಓಲೈಕೆಗಾಗಿ ಅಲ್ಲಿನ ರಾಜಕಾರಣಿಗಳು ತೆರವು ಪ್ರಕರಣ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ಯಲಹಂಕ ಶಾಸಕ ಎಸ್‌.ಆರ್‌.ವಿಶ್ವನಾಥ್‌ ದೂರಿದರು.

ಅಕ್ರಮ ಮನೆಗಳ ತೆರವು ಪ್ರಕರಣದ ಕುರಿತು ಬಿಜೆಪಿ ವತಿಯಿಂದ ನಡೆಸಿದ್ದ ‘ಸತ್ಯಶೋಧನೆ’ಯ ವರದಿಯನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ತೆರವುಗೊಂಡವರಲ್ಲಿ ರೋಹಿಂಗ್ಯಾ ಮತ್ತು ಬಾಂಗ್ಲಾದೇಶಿಯರೂ ಇರುವುದರಿಂದ ಇಡೀ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ADVERTISEMENT

‘ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಈ ವಿಷಯವಾಗಿ ಭಾರಿ ಕೂಗಾಡಿದ್ದರು. ಕೇರಳದ ಚುನಾವಣೆಗಾಗಿ ಅವರು ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ. ಅಲ್ಲಿ ಕೇರಳದವರು ಇರಲಿ ಬಿಡಲಿ, ಅಲ್ಲಿನ ರಾಜಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಲಿ ಪಡೆಯುವ ಕೆಲಸ ಮಾಡಿದ್ದಾರೆ. ನಮಗೆ ಸಿಕ್ಕ ಪಟ್ಟಿಯಲ್ಲಿ ಅಲ್ಲಿಒಬ್ಬ ಕ್ರೈಸ್ತ ಧರ್ಮೀಯ ಹೊರತುಪಡಿಸಿ ಬಹುತೇಕ ಎಲ್ಲರೂ ಮುಸ್ಲಿಮರೇ ಇದ್ದಾರೆ. ಆದರೆ ಅವರಲ್ಲಿ ಬಹುಪಾಲು ಜನ ಕರ್ನಾಟಕದವರಲ್ಲ’ ಎಂದರು.

‘ಅವರ ಭಾಷೆ ಹಿಂದಿಯೂ ಅಲ್ಲ, ಉರ್ದುವೂ ಅಲ್ಲ. ಅದು ನಮಗೆ ಅರ್ಥವೂ ಆಗುವುದಿಲ್ಲ. ಬಾಂಗ್ಲಾ ಮತ್ತು ರೋಹಿಂಗ್ಯಾ ಭಾಷೆ ಕೇಳಿದೊಡನೆ ಗೊತ್ತಾಗುತ್ತದೆ. ಮೊನ್ನೆ ಟಿ.ವಿ ಚಾನೆಲ್‌ ಒಂದರಲ್ಲಿ ಮಹಿಳೆಯೊಬ್ಬರು ಜೈ ಬಾಂಗ್ಲಾ ಎಂದು ಹೇಳಿದ್ದನ್ನು ಕೇಳಿದ್ದೇವೆ. ಅವರು ರಾಜಾರೋಷವಾಗಿ ಇದ್ದಾರೆ. ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ’ ಎಂದು ಹೇಳಿದರು.

‘ನಗರದಲ್ಲಿ 2 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮತ್ತು ಬಾಂಗ್ಲಾ ವಲಸಿಗರಿದ್ದಾರೆ ಎಂಬ ವರದಿಗಳಿವೆ. ಅವೆಲ್ಲವನ್ನೂ ಪರಿಶೀಲಿಸಿ, ಅಂಥವರನ್ನು ಬಂಧಿಸಬೇಕು. ಇಲ್ಲವೇ ಅವರ ದೇಶಕ್ಕೆ ವಾಪಸ್‌ ಕಳುಹಿಸಬೇಕು. ರಾಜಾ ಕಾಲುವೆ ಮೇಲೆ ಮನೆ ಕಟ್ಟಿದ್ದಾರೆ ಎಂದು ಒಡೆದು ಹಾಕಲಾಗಿದೆ. ಕಾಚರಕನ ಹಳ್ಳಿಯ ಕೆರೆಯಲ್ಲಿ ಮನೆ ಕಟ್ಟಿದರೆಂದು ಗುಡಿಸಿಲಿಗೆ ಬೆಂಕಿ ಹಾಕಿದ್ದರು. ಅವರಿಗೆ ಪರ್ಯಾಯ ವಸತಿ ಕೊಡುವ ವಿಚಾರ ಇರಲಿ, ಇನ್ನೂ ಪರಿಹಾರ ಕೊಟ್ಟಿಲ್ಲ’ ಎಂದು ಟೀಕಿಸಿದರು.

ಶಿಫಾರಸುಗಳು

*ನಗರದಲ್ಲಿ ಸಾವಿರಾರು ಜನ ಮನೆಗಳಿಗಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಅಕ್ರಮ ವಲಸಿಗರಿಗೆ ಅಕ್ರಮವಾಗಿ ಮನೆ ಕೊಡುವುದಾಗಲೀ ನಿಯಮಬಾಹಿರವಾಗಿ ಸಹಾಯಧನ ನೀಡುವುದಾಗಲೀ ಮಾಡಬಾರದು.

*ಕಲಬುರಗಿ ಮತ್ತಿತರ ಕಡೆಗಳಿಂದ ಬಂದು ಅಕ್ರಮವಾಗಿ ಗುಡಿಸಲು ಹಾಕಿಕೊಂಡ ಕಾರಣಕ್ಕೆ ತೆರವುಗೊಳಿಸಿ ನಿರಾಶ್ರಿತರಾದ ಕನ್ನಡಿಗರಿಗೆ ಪರಿಹಾರವಾಗಿ ಮನೆ ಕೊಟ್ಟಿಲ್ಲ. ಆದರೆ ಬೇರೆ ರಾಜ್ಯ ಮತ್ತು ಅನ್ಯ ದೇಶದವರಿಗೆ ಎಲ್ಲ ರೀತಿಯ ಸೌಲಭ್ಯ ಕೊಡುವುದನ್ನು ಒಪ್ಪುವುದಿಲ್ಲ. ಅವರನ್ನೆಲ್ಲ ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು.

*ಮುಸ್ಲಿಮರಿಗೆ ಗುಡಿಸಲು ಕಟ್ಟಿಕೊಳ್ಳಲು ಅವಕಾಶ ಕೊಟ್ಟ ಸಚಿವ ಕೃಷ್ಣ ಬೈರೇಗೌಡ ಅವರ ಆಪ್ತ ವಸೀಂ ಅವರನ್ನು ಬಂಧಿಸಬೇಕು.

* ಬೆಂಗಳೂರಿನಲ್ಲಿ ಸರ್ಕಾರಿ ಜಾಗದಲ್ಲಿ ಹೊಸದಾಗಿ ಗುಡಿಸಲು ಹಾಕಿಕೊಂಡವರನ್ನು ಕೂಡಲೇ ತೆರವುಗೊಳಿಸಬೇಕು.

ಕರ್ನಾಟಕವನ್ನು ಕೇರಳ ಆಳುತ್ತಿದೆಯೇ: ಅಶೋಕ ಪ್ರಶ್ನೆ

‘ರಾಜ್ಯದಲ್ಲಿ 36 ಲಕ್ಷ ಜನ ಲಕ್ಷಾಂತರ ರೂಪಾಯಿ ಪಾವತಿ ಮಾಡಿ ಮನೆ ಪಡೆಯಲು ಕಾದು ಕುಳಿತ್ತಿದ್ದಾರೆ. ಕೇರಳದಲ್ಲಿ ಕೋಗಿಲೆ ಕೂಗಿದೆ ಎಂದಾಕ್ಷಣ ರಾಜ್ಯದ ಕಾಗೆಗಳು ಬಾಯಿ ಮುಚ್ಚಿಕೊಂಡಿವೆ’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರು ಕಾಂಗ್ರೆಸ್‌ ನಾಯಕರನ್ನು ಲೇವಡಿ ಮಾಡಿದರು.

‘ಕೇರಳ ಸರ್ಕಾರ ಕರ್ನಾಟಕವನ್ನು ಆಳುತ್ತಿದೆಯೇ? ವೇಣುಗೋಪಾಲ್ ಹಾಗೂ ಅಲ್ಲಿನ ಮುಖ್ಯಮಂತ್ರಿಯ ಮಾತನ್ನು ಇಲ್ಲಿ ಸಿದ್ದರಾಮಯ್ಯ ಕೇಳುತ್ತಿದ್ದಾರಾ? ಇಲ್ಲಿನ ಸರ್ಕಾರ ಕೇರಳದ ಕೈಗೊಂಬೆಯಾಗಬಾರದು. ಕಾಸರಗೋಡಿನ ಕನ್ನಡಿಗರ ಮೇಲೆ ಕೇರಳ ಸರ್ಕಾರ ದೌರ್ಜನ್ಯ ಮಾಡುತ್ತಿದ್ದರೂ ಒಂದು ಪತ್ರ ಬರೆದು ತಣ್ಣಗೆ ಕುಳಿತಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.