ADVERTISEMENT

ಕೋಗಿಲು ಬಡಾವಣೆ| ಮನೆ ಹಂಚಿಕೆಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಆಗ್ರಹ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 14:29 IST
Last Updated 3 ಜನವರಿ 2026, 14:29 IST
   

ಬೆಂಗಳೂರು: ಮನೆಗಳ ಮಂಜೂರಾತಿಗಾಗಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ 65,000 ಅರ್ಜಿಗಳು ಸಲ್ಲಿಕೆಯಾಗಿದ್ದು, ಕೋಗಿಲು ಬಡಾವಣೆಯ ನಿರಾಶ್ರಿತರಿಗೆ ಮನೆಗಳನ್ನು ಹಂಚಿಕೆ ಮಾಡುವಾಗ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಒತ್ತಾಯಿಸಿದರು.

ನಿಗಮಕ್ಕೆ ಭೇಟಿ ನೀಡಿ, ಅಧಿಕಾರಿಗಳ ಜತೆ ಚರ್ಚಿಸಿದ ಬಳಿಕ ಮಾತನಾಡಿದ ಅವರು, ‘ನಿಗಮವು ಸುಮಾರು 7,000 ಮನೆಗಳನ್ನು ನಿರ್ಮಿಸಿದೆ. ಇನ್ನೂ 10,000 ಮನೆಗಳು ನಿರ್ಮಾಣ ಹಂತದಲ್ಲಿವೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಕನ್ನಡಿಗರು ಬಲಿಯಾಗಿದ್ದಾರೆ. 13,000 ಜನರು ಪ್ರವಾಹದಿಂದ ಮನೆ ಕಳೆದುಕೊಂಡಿದ್ದರೂ ಅವರಿಗೆ ಮನೆ ನೀಡಿಲ್ಲ’ ಎಂದು ದೂರಿದರು.

‘80 ವರ್ಷದ ಮಹಿಳೆಯೊಬ್ಬರು ಪೂರ್ತಿ ಮೊತ್ತ ಪಾವತಿಸಿದರೂ ಅವರಿಗೆ ಮನೆ ವಿತರಣೆಯಾಗಿಲ್ಲ. ಕಳೆದ ನಾಲ್ಕು ತಿಂಗಳಿಂದ ಅವರು ಅಲೆದಾಡುತ್ತಿದ್ದಾರೆ.  ಕುಡಿಯುವ ನೀರು ಹಾಗೂ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಇದೆ ರೀತಿ ಸಾವಿರಾರು ಕನ್ನಡಿಗರು ಮನೆಗಾಗಿ ಕಾಯುತ್ತಿದ್ದಾರೆ. ಸರ್ಕಾರ ನಿರ್ಲಕ್ಷ್ಯ ಖಂಡಿಸಿ ಇದೇ ಜ.5ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

ADVERTISEMENT

‘ಕೋಗಿಲು ಬಡಾವಣೆಗೆ ಬಿಜೆಪಿ ನಿಯೋಗ ತೆರಳುವ ಮೊದಲು ಕನ್ನಡಿಗರನ್ನು ಕರೆತಂದು ಅಲ್ಲಿ ಇರಿಸಿದ್ದಾರೆ. ₹16 ಸಾವಿರಕ್ಕೆ ಆಧಾರ್‌ ಕಾರ್ಡ್‌ ಮಾಡಿಸಿಕೊಡುವ ತಂಡ ಇದೆ. ವೋಟಿಗಾಗಿ ಅಲ್ಲಿ ತಮಗೆ ಬೇಕಾದವರು ನೆಲಸುವಂತೆ ಮಾಡಿದ್ದಾರೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.