ADVERTISEMENT

ಪಟ್ಟು ಬಿಡದ ಸಚಿವ ಮುನಿಯಪ್ಪ: ಎಡಗೈಗೆ ಕೋಲಾರ; ಯಾರಿಗೆ ಹಾರ?

ಸಂಧಾನದ ಬಳಿಕ ತಣ್ಣಗಾದ ಸಚಿವ, ಶಾಸಕರ ಬಣ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 21:35 IST
Last Updated 28 ಮಾರ್ಚ್ 2024, 21:35 IST
ಕೆ.ಎಚ್. ಮುನಿಯಪ್ಪ
ಕೆ.ಎಚ್. ಮುನಿಯಪ್ಪ   

ಬೆಂಗಳೂರು: ಕೋಲಾರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ರಾಜೀನಾಮೆಯ ಬೆದರಿಕೆ ಹಾಕಿದ್ದ ಸಚಿವ ಹಾಗೂ ಶಾಸಕರು, ಸಚಿವ ಕೆ.ಎಚ್. ಮುನಿಯಪ್ಪ ಕುಟುಂಬದ ಹೊರತಾಗಿ ಎಡಗೈ ಸಮುದಾಯದ ಯಾರಿಗಾದರೂ ಟಿಕೆಟ್ ನೀಡಲು ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ಪಕ್ಷದೊಳಗಿನ ಸಂಘರ್ಷ ತಿಳಿಯಾಗಿದ್ದು, ಯಾರಿಗೆ ಟಿಕೆಟ್ ಎಂಬುದು ಇನ್ನೂ ಆಖೈರಾಗಿಲ್ಲ.

ಈ ಬೆಳವಣಿಗೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಚಿವ ಮುನಿಯಪ್ಪ, ತಮ್ಮ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಲೇಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ. ಹೀಗಾಗಿ, ಅಭ್ಯರ್ಥಿ ಆಯ್ಕೆ ವಿಷಯ ಇತ್ಯರ್ಥವಾಗದೇ ಉಳಿದಿದೆ. ರಾಜ್ಯಸಭೆಯ ಮಾಜಿ ಸದಸ್ಯ ಎಲ್. ಹನುಮಂತಯ್ಯ ಅವರನ್ನೇ ಹೈಕಮಾಂಡ್ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. 

ಬುಧವಾರ ಇಡೀ ದಿನ ರಾಜಕೀಯ ಪ್ರಹಸನವನ್ನೇ ನಡೆಸಿದ್ದ ಶಾಸಕರು, ವಿಧಾನಪರಿಷತ್ತಿನ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಬಣದ ಮುಂಚೂಣಿಯಲ್ಲಿದ್ದರು. ಮುಖ್ಯಮಂತ್ರಿ ಮಧ್ಯಪ್ರವೇಶದ ಬಳಿಕ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಅವರು ಹೇಳಿದ್ದರು. 

ADVERTISEMENT

ರಾಜೀನಾಮೆ ನೀಡಲು ಮುಂದಾದ ಮೂವರು ಶಾಸಕರು, ವಿಧಾನ ಪರಿಷತ್‌ನ ಇಬ್ಬರು ಸದಸ್ಯರ ಜೊತೆ ಗುರುವಾರ ಸಂಜೆ ಸಭೆ ನಡೆಸಿದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೆಲ್ಲರ ಅಭಿಪ್ರಾಯವನ್ನೂ ಆಲಿಸಿದರು.

‘ಯಾವುದೇ ಕಾರಣಕ್ಕೂ ಮುನಿಯಪ್ಪ ಕುಟುಂಬಕ್ಕೆ ನೀಡಬಾರದು; ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಲಗೈ ಸಮುದಾಯದ ಸಿ.ಎಂ. ಮುನಿಯಪ್ಪ ಅವರಿಗೆ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಸಚಿವ, ಶಾಸಕರ ಬಣ ಪ್ರತಿಪಾದಿಸಿತು.

‘ಪರಿಶಿಷ್ಟ ಜಾತಿಗೆ ಮೀಸಲಾದ ಐದು ಕ್ಷೇತ್ರಗಳ ಪೈಕಿ ಮೂರನ್ನು ಬಲಗೈ ಸಮುದಾಯಕ್ಕೆ ನೀಡಲಾಗಿದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ ನೀಡಲಾಗಿದ್ದು, ಕೋಲಾರದಲ್ಲಿ ಬಲಗೈಗೆ ನೀಡಿದರೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಎಡಗೈ ಸಮುದಾಯದ ಆಕ್ರೋಶಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ, ಎಡಗೈಗೆ ನೀಡಬೇಕಿದೆ’ ಎಂಬ ಚರ್ಚೆಯೂ ನಡೆಯಿತು. ‘ಮುನಿಯಪ್ಪ ಕುಟುಂಬ ಬಿಟ್ಟು ಎಡಗೈ ಸಮುದಾಯದ ಯಾರಿಗಾದರೂ ಕೊಡುವ ವಿಷಯದಲ್ಲಿ ನಿಮ್ಮ ಮತ್ತು ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ’ ಎಂದು ಅಸಮಾಧಾನಿತ ಶಾಸಕರು ವಾಗ್ದಾನ ನೀಡಿದರು.

ಸಂಧಾನ ಯಶಸ್ವಿ: ಬೈರತಿ

ಸಭೆಯ ಬಳಿಕ ಮಾತನಾಡಿದ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ‘ಸಂಧಾನ ಸಭೆ ಯಶಸ್ವಿಯಾಗಿದೆ. ಕೋಲಾರ ಟಿಕೆಟ್‌ ವಿಚಾರದಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಎಐಸಿಸಿ ತೆಗೆದುಕೊಳ್ಳುವ ತಿರ್ಮಾನಕ್ಕೆ ಬದ್ಧರಾಗುವುದಾಗಿ ಶಾಸಕರು ತಿಳಿಸಿದ್ದಾರೆ’ ಎಂದರು.

‘ಕೋಲಾರ ಟಿಕೆಟ್ ಅಂತಿಮವಾಗಿದೆ ಎಂಬ ಕಾರಣಕ್ಕೆ ಶಾಸಕರಲ್ಲಿ ಗೊಂದಲ ಉಂಟಾಗಿತ್ತು. ಸಭೆಯಲ್ಲಿ ಯಾವುದೇ ವ್ಯಕ್ತಿಯ ಹೆಸರು ಪ್ರಸ್ತಾಪ ಆಗಿಲ್ಲ. ಎಲ್ಲ ಶಾಸಕರಿಂದ ವೈಯಕ್ತಿಕ ಅಭಿಪ್ರಾಯ ಕೇಳಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಕೆಲವು ಸೂಚನೆಗಳನ್ನೂ ನೀಡಿದ್ದು, ಬಹಿರಂಗವಾಗಿ ಮಾತನಾಡಬಾರದೆಂದು ಸಲಹೆ ನೀಡಿದ್ದಾರೆ’ ಎಂದೂ ಹೇಳಿದರು.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಸಚಿವ ಡಾ. ಎಂ.ಸಿ. ಸುಧಾಕರ್, ‘ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪಡೆದುಕೊಂಡಿದ್ದಾರೆ. ವಿಚಾರಗಳನ್ನು ಹೈಕಮಾಂಡ್‌ಗೆ ತಿಳಿಸುತ್ತೇವೆ ಎಂದಿದ್ದಾರೆ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ’ ಎಂದರು.

‘ನಮ್ಮಿಂದ ಪಕ್ಷಕ್ಕೆ ಹಾನಿಯಾಗಲು ಬಿಡುವುದಿಲ್ಲ. ಪಕ್ಷದ ಆದೇಶಕ್ಕೆ ಗೌರವ ಕೊಟ್ಟು ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ. ರಾಜೀನಾಮೆ ನೀಡಲು ಮುಂದಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದರು.

‘ಪಕ್ಷಕ್ಕೆ ಮುಜುಗರ ಆಗುವ ಕೆಲಸ ಆಗಿದೆ. ಮುಂದೆ ಗೊಂದಲ ಆಗದಂತೆ ನೋಡಿಕೊಳ್ಳುತ್ತೇವೆ. ನಾವು ಚುನಾವಣೆ ಎದುರಿಸಬೇಕಾಗಿದೆ. ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇವೆ. ಪಕ್ಷದ ಹಿತದೃಷ್ಟಿ ನಮಗೆ ಮುಖ್ಯ. ಆಕಾಂಕ್ಷಿಗಳ ಬಗ್ಗೆ ಚರ್ಚೆ ಆಗಿಲ್ಲ. ಸಮಸ್ಯೆಗಳನ್ನು ಆಲಿಸಿದ್ದಾರೆ. ಅವರು ಏನೇ ತೀರ್ಮಾನ ಮಾಡಿದರೂ ನಾವು ಅದಕ್ಕೆ ಬದ್ಧ. ಸಭೆಯಲ್ಲಿ ಯಾವುದೇ ಹೊಸ ಹೆಸರು ಪ್ರಸ್ತಾಪ ಮಾಡಿಲ್ಲ’ ಎಂದೂ  ಸ್ಪಷ್ಟಪಡಿಸಿದರು.

ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌, ಮಾಲೂರು ಕೆ.ವೈ. ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್, ನಸೀರ್‌ ಅಹ್ಮದ್‌ ಹಾಗೂ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸಭೆಯಲ್ಲಿ ಭಾಗವಹಿಸಿದ್ದರು.

ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ?

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ಸಿಗುವುದು ಬಹುತೇಕ ಖಚಿತವಾಗಿದೆ. 

ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಲೋಕಸಭಾ ಕ್ಷೇತ್ರಗಳ ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4ರಂದು ಕೊನೆ ದಿನವಾಗಿದೆ. ರಕ್ಷಾ ರಾಮಯ್ಯ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯಿಲಿ ಹಾಗೂ ಮಾಜಿ ಶಾಸಕ ಎಚ್.ಎನ್. ಶಿವಶಂಕರರೆಡ್ಡಿ ಹೆಸರುಗಳು ಮುಂಚೂಣಿಯಲ್ಲಿವೆ. ರಕ್ಷಾ ಹೆಸರನ್ನೇ ವರಿಷ್ಠರು ಅಂತಿಮಗೊಳಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಅಳಿಯನಿಗೆ ಟಿಕೆಟ್‌: ಮುನಿಯಪ್ಪ ಪಟ್ಟು

ಅಳಿಯ ಹಾಗೂ ಪುತ್ರಿ ಜೊತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಕೆ.ಎಚ್‌. ಮುನಿಯಪ್ಪ, ತಮ್ಮ ಅಳಿಯನಿಗೆ ಟಿಕೆಟ್‌‌ಗೆ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ಗೃಹ ಸಚಿವ ಜಿ. ಪರಮೇಶ್ವರ ಕೂಡ ಇದ್ದರು. ‘ಅಳಿಯನಿಗೆ ಟಿಕೆಟ್ ನೀಡಿದರೆ ಗೆಲ್ಲಿಸಿಕೊಂಡು ಬರುತ್ತೇನೆ. ಆದರೆ, ಟಿಕೆಟ್ ವಿಚಾರವಾಗಿ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜೀನಾಮೆ ನೀಡುವ ನಾಟಕ ಮಾಡುತ್ತಿದ್ದಾರೆ‘ ಎಂದು ಮುನಿಯಪ್ಪ ಹೇಳಿದ್ದಾರೆ. ಅದಕ್ಕೆ, ‘ಟಿಕೆಟ್‌ ವಿಷಯದಲ್ಲಿ ಜಿಲ್ಲೆಯ ಶಾಸಕರು, ಸಚಿವರ ಅಭಿಪ್ರಾಯ ಮುಖ್ಯ. ಬೇರೆ ಕ್ಷೇತ್ರ ಗಳಲ್ಲೂ ಶಾಸಕರ ಅಭಿಪ್ರಾಯ ಆಲಿಸಲಾಗಿದೆ. ನೀವು ಸಚಿವರು, ಶಾಸಕರನ್ನು ಒಪ್ಪಿಸಿ’ ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. 

‘ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ಇಲ್ಲ’

‘ಕೋಲಾರದಲ್ಲಿ ಎಲ್ಲ ನಾಯಕರು ಒಟ್ಟಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಲಿದ್ದಾರೆ. ಯಾರ ವೈಯಕ್ತಿಕ ಪ್ರತಿಷ್ಠೆಗೂ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೋಲಾರ ಟಿಕೆಟ್ ವಿಚಾರದಲ್ಲಿ ಯಾರೂ ರಾಜೀನಾಮೆ ನೀಡುವುದಿಲ್ಲ. ಟಿಕೆಟ್ ವಿಚಾರವಾಗಿ ಒತ್ತಡ ಇದೆ. ಪಕ್ಷ ಇದುವರೆಗೂ ಯಾರಿಗೂ ಟಿಕೆಟ್ ಘೋಷಣೆ ಮಾಡಿಲ್ಲ’ ಎಂದರು. 

ವೀಣಾ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ?

ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಕಾರಣಕ್ಕೆ ಮುನಿಸಿಕೊಂಡಿರುವ ವೀಣಾ ಕಾಶಪ್ಪನವರ ತಮ್ಮ ಪತಿ, ಶಾಸಕ ವಿಜಯಾನಂದ ಕಾಶಪ್ಪನವರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದರು. ಆ ವೇಳೆ ಮುಖ್ಯಮಂತ್ರಿ, ಅವರಿಗೆ ಲೋಕಸಭೆ ಚುನಾವಣೆಯ ಬಳಿಕ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಇದಕ್ಕೆ ಒಪ್ಪಿರುವ ವೀಣಾ, ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಎಂದು ಗೊತ್ತಾಗಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.