ಬೆಂಗಳೂರು: ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಲು ಬಿಜೆಪಿ ನಾಯಕರು ತಮಗೆ ₹ 5 ಕೋಟಿ ಮುಂಗಡ ನೀಡಿದ್ದರು ಎಂದು ಆರೋಪಿಸಿದ್ದ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಬುಧವಾರ ಎಸಿಬಿ ಅಧಿಕಾರಿಗಳ ಮುಂದೆ ದಿಢೀರನೆ ಹಾಜರಾದರು.
ತನಿಖಾಧಿಕಾರಿಗಳ ಮುಂದೆ ಹಾಜರಾದ ಶಾಸಕರು ಯಾವುದೇ ಹೇಳಿಕೆ ನೀಡಲಿಲ್ಲ. ತನಿಖೆಗೆ ಸಹಕರಿಸಲುತಾವು ಸಿದ್ಧವಿದ್ದು ಒಂದೆರಡು ದಿನಗಳ ಕಾಲಾವಕಾಶ ನೀಡುವಂತೆ ಕೇಳಿದರು. ರೇಸ್‌ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಎಸಿಬಿ ಕಚೇರಿಗೆ ಶಾಸಕರು ಬರುತ್ತಿದ್ದಂತೆ ಟಿ.ವಿ ಚಾನಲ್‌ಗಳ ಪ್ರತಿನಿಧಿಗಳು ಮುಗಿಬಿದ್ದರು. ಇದರಿಂದ ಅವರು ಸಿಟ್ಟಿಗೆದ್ದು ಕೂಗಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ನಾನು ಇಲ್ಲಿಗೆ ಬರುವ ಸುದ್ದಿ ನಿಮಗೆ ಹೇಗೆ ಗೊತ್ತಾಯಿತು? ನಿಮ್ಮನ್ನು ಯಾರು ಕರೆಸಿದ್ದಾರೆ ಎಂದು ನನಗೆ ಗೊತ್ತು’ ಎಂದು ರೇಗಾಡಿದರು ಎನ್ನಲಾಗಿದೆ.
ಆರೋಪವೇನು?: ‘ಆಪರೇಷನ್ ಕಮಲ’ಕ್ಕೆ ಪ್ರಯತ್ನಿಸಿದ್ದ ಬಿಜೆಪಿ ನಾಯಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಬಿಜೆಪಿಗೆ ಸೇರಿಸಿಕೊಳ್ಳಲು ₹25 ಕೋಟಿ ಆಮಿಷವೊಡ್ಡಿದ್ದರು’ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.