ADVERTISEMENT

ಪೋಷಕರ ಯೋಜನೆ: ಮಾರ್ಗಸೂಚಿ ಪಾಲನೆಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 16:01 IST
Last Updated 18 ಡಿಸೆಂಬರ್ 2025, 16:01 IST
   

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮಾರ್ಗಸೂಚಿಗಳನ್ನು ರೂಪಿಸುವತನಕ, ಪೋಷಕರ ಯೋಜನೆ–2025ಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ಹೈಕೋರ್ಟ್‌ ಅನುಮೋದಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು’ ಎಂದು ಹೈಕೋರ್ಟ್, ರಾಜ್ಯದ ಎಲ್ಲಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ. 

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. 

ವಿಚಾರಣೆ ವೇಳೆ ಮಧ್ಯಂತರ ಅರ್ಜಿದಾರರ ಪರ ವಕೀಲರು, ‘ಹಲವು ಪಾಲುದಾರರ ಜತೆ ಸಮಾಲೋಚನೆ ನಡೆಸಿದ ನಂತರ; ಮಕ್ಕಳ ಲಭ್ಯತೆ, ಸುಪರ್ದಿ ಮತ್ತು ಪಾಲನೆ ಮಾರ್ಗಸೂಚಿಗಳನ್ನು ಒಳಗೊಂಡ ಪೋಷಕರ ಯೋಜನೆ–2025 ಅನ್ನು ರೂಪಿಸಲಾಗಿದ್ದು, ಇದನ್ನು ಕೊಲ್ಕತ್ತಾ ಹೈಕೋರ್ಟ್‌ ಮುಂದೆ ಇಡಲಾಗಿತ್ತು. ಈ ಮಾರ್ಗಸೂಚಿಯನ್ನು 2025ರ ಸೆಪ್ಟೆಂಬರ್ 23ರಂದು ಅನುಮೋದಿಸಿದೆ’ ಎಂದರು.

ADVERTISEMENT

‘ಈ ನಿಟ್ಟಿನಲ್ಲಿ ರಾಜ್ಯದಲ್ಲಿನ ನಿಯಮ ನಿರೂಪಣಾ ಸಮಿತಿಯೂ ಈ ಮಾರ್ಗಸೂಚಿಯನ್ನು ಪರಿಗಣಿಸಿ ಸೂಕ್ತ ಬದಲಾವಣೆಗಳನ್ನು ಮಾಡುವವರೆಗೆ ಅದನ್ನೇ ಅಳವಡಿಸಿಕೊಳ್ಳಲು ನಿರ್ದೇಶಿಸಬಹುದು’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಈ ಮಾರ್ಗಸೂಚಿಗಳನ್ನು ಮಹಿಳೆಯರ ವಿರುದ್ಧದ ಕೌಟುಂಬಿಕ ದೌರ್ಜನ್ಯ ಕಾಯ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರ ಹೊಂದಿರುವ ರಾಜ್ಯದ ಎಲ್ಲಾ ಜಿಲ್ಲಾ ನ್ಯಾಯಾಧೀಶರು, ಕೌಟುಂಬಿಕ ನ್ಯಾಯಾಲಯಗಳು ಮತ್ತು ಮ್ಯಾಜಿಸ್ಪ್ರೇಟ್‌ಗಳಿಗೆ ತಲುಪಿಸಬೇಕು. ಸಮಿತಿಯು ನಿಯಮಗಳನ್ನು ರೂಪಿಸುವವರೆಗೆ ಮತ್ತು ಅನುಮೋದಿಸುವವರೆಗೆ ಈ ಮಾರ್ಗಸೂಚಿಗಳನ್ನು ಜಾರಿಗೊಳಿಸಬೇಕು’ ಎಂದು ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.