ADVERTISEMENT

ಕೊಲ್ಲೂರು ಮೂಕಾಂಬಿಕಾ ದೇವಾಲಯದ 'ಮೂರ್ತಿ ಧಾರಕ' ವ್ಯಾಜ್ಯ ಅಂತ್ಯ

10 ವರ್ಷಗಳ ಹಿಂದಿನ ಸ್ಥಿತಿ ಪಾಲನೆಗೆ ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2019, 11:40 IST
Last Updated 22 ಫೆಬ್ರುವರಿ 2019, 11:40 IST
   

ಬೆಂಗಳೂರು:ಕೊಲ್ಲೂರು ಮೂಕಾಂಬಿಕಾ ದೇವಾಲಯದ ‘ದೇವರ ಮೂರ್ತಿ ಧಾರಕ’ ವಿಷಯಕ್ಕೆ ಸಂಬಂಧಿಸಿದಂತೆ 2005ರಲ್ಲಿ ಇದ್ದಂತಹ ಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗಬೇಕು, ಎಂದು ಆದೇಶಿಸಿರುವ ಹೈಕೋರ್ಟ್‌, ಈ ಕುರಿತ ಹತ್ತು ವರ್ಷಗಳ ವಿವಾದಕ್ಕೆ ಇತಿಶ್ರೀ ಹಾಡಿದೆ. ಇದರಿಂದಾಗಿ ಮೂರ್ತಿ ಕಾಳಿದಾಸ ಭಟ್ಟ ಒಬ್ಬರೇ ದೇವರ ಮೂರ್ತಿಯನ್ನು ಹೊರುವ ಪದ್ಧತಿ ಮುಂದುವರಿದಂತಾಗಿದೆ.

ಈ ಕುರಿತಂತೆ ಮೂರ್ತಿ ಕಾಳಿದಾಸ ಭಟ್ಟ ಹಾಗೂ ಅವರ ಕಿರಿಯ ಸಹೋದರ ಶ್ರೀಶ ಭಟ್ಟ ಸಲ್ಲಿಸಿದ್ದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಹಾಗೂ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ಏತನ್ಮಧ್ಯೆ ‘ನನ್ನ ಕಿರಿಯ ಸಹೋದರ ಶ್ರೀಶ ಭಟ್ಟ ಅವರಿಗೆ ತಿಂಗಳಲ್ಲಿ ಹದಿನೈದು ದಿನ ದೇವರ ಧಾರಣೆಗೆ ಅವಕಾಶ ನೀಡಬೇಕು’ ಎಂದು ಈ ಮೊದಲು ಕೋರಲಾಗಿದ್ದ ಅರ್ಜಿಯನ್ನು ಮೂರ್ತಿ ಕಾಳಿದಾಸ ಭಟ್ಟರು ಇದೇ ವೇಳೆ ಹಿಂಪಡೆದಿದ್ದಾರೆ.

ADVERTISEMENT

ಮೂರ್ತಿ ಕಾಳಿದಾಸ ಭಟ್ಟರು ತಮ್ಮ ಅನಾರೋಗ್ಯದ ಕಾರಣ ನೀಡಿ, ‘ಪ್ರತಿ ತಿಂಗಳಲ್ಲಿ ಹದಿನೈದು ದಿನ (ಕೃಷ್ಣಪಕ್ಷದಲ್ಲಿ) ನನ್ನ ಕಿರಿಯ ಸಹೋದರ ಶ್ರೀಶ ಭಟ್ಟರು ದೇವರ ಮೂರ್ತಿ ಹೊರಲು ಅವಕಾಶ ಕೊಡಬೇಕು’ ಎಂದು ದೇವಸ್ಥಾನದ ಆಡಳಿತ ಮಂಡಳಿಗೆ ಕೋರಿದ್ದರು. ಇದನ್ನು ಆಡಳಿತ ಮಂಡಳಿ ಮಾನ್ಯ ಮಾಡಿತ್ತು.

ಶ್ರೀಶ ಭಟ್ಟರಿಗೂ ಅವಕಾಶ ನೀಡಿದ್ದಕ್ಕೆ ಕೆ.ಎನ್‌.ಗೋಪಾಲಕೃಷ್ಣ ಅಡಿಗ ಎಂಬುವರು ತಕರಾರು ತೆಗೆದಿದ್ದರು. ‘ಇರುವ ಒಂದೇ ಹುದ್ದೆಗೆ ಇಬ್ಬರನ್ನು ನೇಮಕ ಮಾಡಿರುವುದು ಸರಿಯಲ್ಲ’ ಎಂದು ಆಕ್ಷೇಪಿಸಿ ಮುಜರಾಯಿ ಇಲಾಖೆ ಮೊರೆ ಹೋಗಿದ್ದರು.

ಈ ಆಕ್ಷೇಪಣೆಯನ್ನು ಮಾನ್ಯ ಮಾಡಿದ್ದ ಮುಜರಾಯಿ ಇಲಾಖೆ, ‘ಕಾಳಿದಾಸ ಭಟ್ಟರು ಮಾತ್ರವೇ ದೇವರ ಧಾರಕರಾಗಿರಬೇಕು. ಶ್ರೀಶ ಭಟ್ಟರಿಗೆ ಅವಕಾಶ ಕೊಟ್ಟಿರುವುದು ಸರಿಯಲ್ಲ’ ಎಂದು ಅವರಿಗೆ ನೀಡಿದ್ದ ಅವಕಾಶವನ್ನು ಹಿಂದಕ್ಕೆ ಪಡೆದಿತ್ತು.

ಈ ಆದೇಶವನ್ನು ಮೂರ್ತಿ ಕಾಳಿದಾಸ ಭಟ್ಟರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ನ್ಯಾಯಪೀಠ 2011ರ ಆಗಸ್ಟ್‌ನಲ್ಲಿ ವಜಾಗೊಳಿಸಿತ್ತು.

ಏಕಸದಸ್ಯ ನ್ಯಾಯಪೀಠದ ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದೀಗ ಮೇಲ್ಮನವಿ ವಿಚಾರಣೆ ವೇಳೆ ಮೂರ್ತಿ ಕಾಳಿದಾಸ ಭಟ್ಟರು, ’ನನ್ನ ಕಿರಿಯ ಸಹೋದರ ಶ್ರೀಶ ಭಟ್ಟರು ಕೃಷ್ಣ ಪಕ್ಷದಲ್ಲಿ ದೇವರ ಧಾರಣೆ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಮುಜರಾಯಿ ಇಲಾಖೆಗೆ 2005ರ ಡಿಸೆಂಬರ್‌ 23ರಂದು ಸಲ್ಲಿಸಿದ್ದ ಮನವಿಯನ್ನು ಹಿಂಪಡೆಯುತ್ತೇನೆ’ ಎಂದು ತಿಳಿಸಿದ್ದಾರೆ.

ಮೂರ್ತಿ ಧಾರಕ ಎಂದರೇನು?: ದೇವಾಲಯದ ಉತ್ಸವ ಮೂರ್ತಿಯನ್ನು ಬೆನ್ನ ಮೇಲೆ ಹೊರುವವರನ್ನು ಮೂರ್ತಿ ಧಾರಕ ಎನ್ನಲಾಗುತ್ತದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯದ ದೇವರ ಧಾರಣೆಯನ್ನು ಮೂರ್ತಿ ಕಾಳಿದಾಸ ಭಟ್ಟರ ಕುಟುಂಬವು ಏಳು ತಲೆಮಾರುಗಳಿಂದ ಪರಂಪರಾಗತವಾಗಿ ಪಾಲನೆ ಮಾಡಿಕೊಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.