ADVERTISEMENT

ಹನುಮಮಾಲೆ ವಿಸರ್ಜನೆ: ಗಂಗಾವತಿ, ಅಂಜನಾದ್ರಿಯಲ್ಲಿ ಪೊಲೀಸ್‌ ಸರ್ಪಗಾವಲು

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2022, 2:59 IST
Last Updated 5 ಡಿಸೆಂಬರ್ 2022, 2:59 IST
   

ಅಂಜನಾದ್ರಿ (ಕೊಪ್ಪಳ ಜಿಲ್ಲೆ): ಗಂಗಾವತಿ ತಾಲ್ಲೂಕಿನ ಅಂಜನಾದ್ರಿಯಲ್ಲಿ ಸೋಮವಾರ ನಡೆಯಲಿರುವ ಹನುಮಮಾಲಾ ವಿಸರ್ಜನೆ ಮತ್ತು ಗಂಗಾವತಿಯಲ್ಲಿ ಆಯೋಜನೆಯಾದ ಸಂಕೀರ್ತನಾ ಯಾತ್ರೆಗೆ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.

ಗಂಗಾವತಿ ನಗರದಲ್ಲಿ ಯಾವುದೇ ಅಹಿತಕರ ಘಟನೆ, ಗಲಭೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹನುಮಮಾಲಾ ವಿಸರ್ಜನೆಗೆ 1.300 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಭಾನುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ನೇತೃತ್ವದಲ್ಲಿ ಗಂಗಾವತಿಯ ಸಿಬಿಎಸ್, ಮಹಾವೀರ, ಗಾಂಧಿ, ಬನ್ನಿಗಿಡದ ಕ್ಯಾಂಪ್, ಕೃಷ್ಣದೇವರಾಯ ವೃತ್ತದಲ್ಲಿ ಪಥ ಸಂಚಲನ ಜರುಗಿತು.

100 ಸಿಸಿಟಿವಿ ಕ್ಯಾಮೆರಾ: ಅಹಿತಕರ ಘಟನೆ ಮೇಲೆ ಹದ್ದಿನ ಕಣ್ಣು ಇಡಲು ಪೊಲೀಸರು ಗಂಗಾವತಿ ನಗರ ಹಾಗೂ ಅಂಜನಾದ್ರಿಗೆ ಹೋಗುವ ಮಾರ್ಗದಲ್ಲಿ 100 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.

ADVERTISEMENT

ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರು ಮಾಲಾಧಾರಿಗಳಿಗೆ ಸ್ವಾಗತ ಕೋರಿ ಭಿತ್ತಿಚಿತ್ರಗಳನ್ನು ಹಾಕಿದ್ದು ಶ್ರೀರಾಮ ಸೇನೆಯ ಆಕ್ರೋಶಕ್ಕೆ ಕಾರಣವಾಗಿದೆ.

‘ಜೈ ಶ್ರೀರಾಮ ಎನ್ನುವ ಹೆಸರಿನಲ್ಲಿ ಹಿಂದೂಗಳು ತಲ್ವಾರ್ ಹಿಡಿದು ಗಲಾಟೆ ಮಾಡುತ್ತಾರೆ ಎಂದಿದ್ದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಹನುಮ ಮಾಲಾಧಾರಿಗಳನ್ನು ಸ್ವಾಗತಿಸುವ ಬ್ಯಾನರ್ ಹಾಕಲು ಯಾವ ನೈತಿಕತೆ ಇದೆ’ ಎಂದು ಶ್ರೀರಾಮ ಸೇನೆ ವಿಭಾಗ ಅಧ್ಯಕ್ಷ ಸಂಜೀವ ಮರಡಿ ಪ್ರಶ್ನಿಸಿದ್ದರು.

ಆದ್ದರಿಂದ ಹನುಮಮಾಲಾ ವಿಸರ್ಜನೆ ರಾಜಕೀಯ ವಾಕ್ಸಮರಕ್ಕೂ ಕಾರಣವಾಗುವ ಸಾಧ್ಯತೆ ಇರುವುದರಿಂದ ವಿಜಯನಗರ, ಬಳ್ಳಾರಿ, ರಾಯಚೂರು, ಗದಗ ಜಿಲ್ಲೆಗಳ ಪೊಲೀಸರು ಮತ್ತು ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.