ADVERTISEMENT

ಅಡವಿಭಾವಿ: ಗುಡಿ ಪ್ರವೇಶಿಸಿದ ದಲಿತರು

ಕುಷ್ಟಗಿ ತಾಲ್ಲೂಕಿನ ಗ್ರಾಮ: ತಹಶೀಲ್ದಾರ್‌ ನೇತೃತ್ವ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:14 IST
Last Updated 8 ಮಾರ್ಚ್ 2020, 20:14 IST
ಕುಷ್ಟಗಿ ತಾಲ್ಲೂಕು ಅಡವಿಭಾವಿಯಲ್ಲಿ ಗ್ರಾಮಸ್ಥರೊಂದಿಗೆ ತಹಶೀಲ್ದಾರ್ ಎಂ.ಸಿದ್ದೇಶ ಸಮಾಲೋಚನೆ ನಡೆಸಿದರು
ಕುಷ್ಟಗಿ ತಾಲ್ಲೂಕು ಅಡವಿಭಾವಿಯಲ್ಲಿ ಗ್ರಾಮಸ್ಥರೊಂದಿಗೆ ತಹಶೀಲ್ದಾರ್ ಎಂ.ಸಿದ್ದೇಶ ಸಮಾಲೋಚನೆ ನಡೆಸಿದರು   

ಕುಷ್ಟಗಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ತಾವರಗೇರಾ ಹೋಬಳಿಯ ಅಡವಿಭಾವಿ ಗ್ರಾಮದಲ್ಲಿ ತಹಶೀಲ್ದಾರ್‌ ಎಂ.ಸಿದ್ದೇಶ ನೇತೃತ್ವದಲ್ಲಿ ದಲಿತರು ಶನಿವಾರ ಮಂದಿರ ಪ್ರವೇಶಿಸಿದರು.

‘ಗ್ರಾಮದ ಹೊರವಲಯದ ಅಮರೇಶ್ವರ ದೇವಸ್ಥಾನದಲ್ಲಿ ದಲಿತರ ಪ್ರವೇಶಕ್ಕೆ ಊರಿನ ಕೆಲ ಸಮುದಾಯದವರು ನಿರ್ಬಂಧ ವಿಧಿಸಿದ್ದಲ್ಲದೆ ದೇವಸ್ಥಾನ ಪ್ರವೇಶಿಸುವ ದಲಿತ ಕುಟುಂಬಗಳಿಗೆ ಕೇಡು ಉಂಟಾಗುತ್ತದೆ ಎಂಬ ಮೂಢನಂಬಿಕೆ ಬಿತ್ತಿದ್ದಾರೆ. ಮದುವೆ ಇತರ ಧಾರ್ಮಿಕ ಕಾರ್ಯಕ್ರಮಗಳಿಂದ ತಮ್ಮನ್ನು ದೂರ ಇಡಲಾಗುತ್ತದೆ’ ಎಂದು ಗ್ರಾಮದ ದಲಿತ ಸಮುದಾಯದ ಕೆಲ ಯುವಕರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಎಂ.ಸಿದ್ದೇಶ, ದಲಿತ ಮತ್ತು ಇತರ ಸಮುದಾಯಗಳ ಹಿರಿಯರು, ಯುವಕರು, ದೇವಸ್ಥಾನ ಸಮಿತಿಯವರೊಂದಿಗೆ ಸಭೆ ನಡೆಸಿ ಅಸ್ಪೃಶ್ಯತೆ ಆಚರಣೆ ಸರಿಯಲ್ಲ ಎಂದು ತಿಳಿವಳಿಕೆ ಮೂಡಿಸಿದರು. ಸಭೆಯ ನಂತರ ದಲಿತರನ್ನು ದೇವಸ್ಥಾನಕ್ಕೆ ಕರೆದೊಯ್ದು ಪೂಜೆ ನೆರವೇರಿಸಿದರು.

ADVERTISEMENT

ಆಗಿದ್ದೇನು: ಮಾರ್ಚ್‌ 9ರಂದು ಅಮರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಧಾರ್ಮಿಕ ಕಾರ್ಯಕ್ರಮಗಳಿಗೆ ಊರಿನ ಜನರಿಂದ ವಂತಿಗೆ ಸಂಗ್ರಹಿಸುವುದು ಹಿಂದಿನಿಂದಲೂ ನಡೆದುಬಂದ ಪರಂಪರೆ. ಅದೇ ರೀತಿ ದಲಿತ ಸಮುದಾಯದವರೂ ವಂತಿಗೆ ನೀಡುತ್ತ ಬಂದಿದ್ದಾರೆ.

‘ವಂತಿಗೆ ನೀಡಲು ನಾವು ಬೇಕು, ದೇವಸ್ಥಾನಕ್ಕೆ ಬರಬಾರದು, ದೇವರ ಸನ್ನಿಧಿಯಲ್ಲಿ ಸಾಮೂಹಿಕ ಮದುವೆ ಮಾಡುವುದಕ್ಕೂ ಅವಕಾಶವಿಲ್ಲ. ಸಾಂಸ್ಕೃತಿಕ, ಮತ್ತಿತರ ಕಾರ್ಯಕ್ರಮಗಳಿಂದಲೂ ದೂರ ಇಡುತ್ತಿದ್ದೀರಿ’ ಎಂದು ದಲಿತ ಸಮುದಾಯದ ಕೆಲ ಯುವಕರು ಇತರ ಸಮುದಾಯದ ಕೆಲವರ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದರು.

‘ಸಾಮೂಹಿಕ ಮದುವೆಯಲ್ಲಿ ಅವಕಾಶ ಇಲ್ಲ, ನಿಮ್ಮ ಮನೆಯಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಊಟಕ್ಕೆ ಮಾತ್ರ ದೇವಸ್ಥಾನದ ಬಳಿ ಬರಬೇಕು’ ಎಂದು ಮೇಲ್ವರ್ಗದ ಕೆಲವರು ದಲಿತರಿಗೆ ಹೇಳಿದ್ದರು ಎನ್ನಲಾಗಿದೆ.

ಸಮಸ್ಯೆ ಇತ್ಯರ್ಥ: ‘ಗ್ರಾಮದಲ್ಲಿಯ ಸಮಸ್ಯೆಯ ಬಗ್ಗೆ ಮಾಹಿತಿ ಬಂದಿದ್ದರಿಂದ ಅಲ್ಲಿಗೆ ತೆರಳಿ ಸಭೆ ನಡೆಸಿದೆ. ದಲಿತರಿಗೆ ಯಾರೂ ನಿರ್ಬಂಧ ವಿಧಿಸಿಲ್ಲ, ತಮ್ಮಷ್ಟಕ್ಕೆ ತಾವೇ ದೂರ ಉಳಿದಿದ್ದಾರೆ ಎಂದು ಗ್ರಾಮದ ಇತರೆ ಸಮುದಾಯದ ಪ್ರಮುಖರು ಹೇಳಿದರು. ಅಸ್ಪೃಶ್ಯತೆಗೆ ಸಂಬಂಧಿಸಿದಂತೆ ಸದ್ಯ ಗ್ರಾಮದಲ್ಲಿ ಯಾವುದೇ ಸಮಸ್ಯೆ ಇಲ್ಲ. ದಲಿತರೊಂದಿಗೆ ಸ್ವತಃ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ನೆರವೇರಿಸಿದ್ದೇನೆ’ ಎಂದು ತಹಶೀಲ್ದಾರ್‌ ಸಿದ್ದೇಶ ಭಾನುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.