ADVERTISEMENT

ಬಂಧಿತ ತಾಯಿ ನೆನೆದು ಕಣ್ಣೀರು | ಮುತ್ತು ಕಟ್ಟಿಸಿಕೊಂಡಿದ್ದ ಯುವತಿಗೆ ಸಖಿ ಸಾಂತ್ವನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 19:45 IST
Last Updated 29 ಡಿಸೆಂಬರ್ 2022, 19:45 IST
   

ಕೊಪ್ಪಳ: ಕಾಯಿಲೆ ಗುಣವಾಗಲಿದೆ ಎನ್ನುವ ನಂಬಿಕೆಗೆ ಕಟ್ಟುಬಿದ್ದ ಯುವತಿ ದೇವದಾಸಿ ಪದ್ಧತಿಯ ಭಾಗವಾಗಿ ‘ಮುತ್ತು’ ಕಟ್ಟಿಸಿಕೊಂಡಿರುವುದಕ್ಕೆ ಪರಿತಪಿಸುತ್ತಿದ್ದು, ಪ್ರಕರಣದಲ್ಲಿ ಬಂಧಿತಳಾಗಿರುವ ತನ್ನ ತಾಯಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾಳೆ.

ಕೊಪ್ಪಳ ತಾಲ್ಲೂಕಿನ 21 ವರ್ಷದ ಯುವತಿಗೆ ಅನಾರೋಗ್ಯಕ್ಕಾಗಿ ಚಿಕಿತ್ಸೆ ಕೊಡಿಸದೇ ದೇವದಾಸಿ ಪಟ್ಟ ಕಟ್ಟಿದ್ದ ಆರೋಪದಡಿ ಆಕೆಯ ಪೋಷಕರು ಮತ್ತು ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ತಂಗಿ ಗಂಡನಿಗೆ ಶೋಧ ಮುಂದುವರಿದಿದೆ.

ಯುವತಿಯು ಮೂರು ದಿನಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯ ‘ಸಖಿ’ಒನ್ ಸ್ಟಾಪ್ ಕೇಂದ್ರದಲ್ಲಿದ್ದು ಮೊದಲ ದಿನ ಯಾರೊಂದಿಗೂ ಮಾತನಾಡದೇ, ಏನಾಗಿದೆ ಎಂದು ಅರ್ಥ ಮಾಡಿಕೊಳ್ಳಲಾಗದೆ ಆಘಾತಕ್ಕೆ ಒಳಗಾಗಿದ್ದಳು.

ADVERTISEMENT

ದಾರಿಯುದ್ದಕ್ಕೂ ಹೋಗುವವರು, ಬರುವವರು ನೋಡಿಕೊಂಡು ‘ಅಮ್ಮ ಬಂದಳು’ ಎಂದು ಕಣ್ಣೀರು ಸುರಿಸುತ್ತಿ
ದ್ದಳು. ಯುವತಿ ಮಾನಸಿಕವಾಗಿ ನೊಂದಿದ್ದು, ಸಹಜ ಸ್ಥಿತಿಗೆ ಬರುವಂತೆ ಮಾಡಲು ಕೇಂದ್ರದ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಆ ಯುವತಿಗೆ ಬುದ್ಧನ ಜೀವನ, ಸಾಧಕರ ಜೀವನಗಾಥೆಗಳನ್ನು ಹೇಳುತ್ತಿದ್ದಾರೆ. ಸಿಬ್ಬಂದಿ, ಮಹಿಳೆಯರ ಜೊತೆ ಬೆರೆತು ಕೆಲಹೊತ್ತು ಮಾತನಾಡುವ ಯುವತಿ, ಒಬ್ಬಳೇ ಇದ್ದಾಗ ಅಮ್ಮನನ್ನು ನೆನೆದು ಕಣ್ಣೀರು ಸುರಿಸುತ್ತಿದ್ದಾಳೆ.

‘ಆಘಾತದಿಂದ ಯುವತಿಯನ್ನು ಹೊರತರಲು ಪ್ರಯತ್ನಿಸಲಾಗುತ್ತಿದೆ. ಮೊದಲ ದಿನಕ್ಕೆ ಹೋಲಿಸಿದರೆ ಕೇಂದ್ರದ ಸಿಬ್ಬಂದಿ ಜೊತೆ ನಿಧಾನವಾಗಿ ಬೆರೆಯುತ್ತಿದ್ದಾಳೆ’ ಎಂದು ಸಖಿ ಕೇಂದ್ರದ ಅಧಿಕಾರಿ ಯಮುನಾ ಬೆಸ್ತರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.