ADVERTISEMENT

ಪತ್ನಿ– ನಾದಿನಿ ಮೇಲೆ ಆ್ಯಸಿಡ್ ಎರಚಿ ಆತ್ಮಹತ್ಯೆ

* ಕೆ.ಪಿ.ಅಗ್ರಹಾರ, ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಘಟನೆ * ದಂಪತಿ ನಡುವೆ ಕೌಟುಂಬಿಕ ಕಲಹ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 21:00 IST
Last Updated 8 ಡಿಸೆಂಬರ್ 2019, 21:00 IST
   

ಬೆಂಗಳೂರು: ತನ್ನ ಮನೆ ಬಿಟ್ಟು ಹೋಗಿ ತವರು ಮನೆ ಸೇರಿದ್ದಳು ಎಂಬ ಕಾರಣಕ್ಕೆ ಪತ್ನಿ ಹಾಗೂ ಆಕೆಯ ಸಹೋದರಿ ಮೇಲೆ ಶರತ್‌ (28) ಎಂಬಾತ ಆ್ಯಸಿಡ್‌ ಎರಚಿದ್ದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ಆ್ಯಸಿಡ್ ದಾಳಿಯಿಂದ ಎಂ. ಶ್ವೇತಾ ಹಾಗೂ ಅನುಷಾ ಎಂಬುವರ ಮುಖ, ಕಣ್ಣು ಹಾಗೂ ಕತ್ತಿಗೆ ಗಾಯವಾಗಿದ್ದು, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಹೇಳಿದರು.

‘ಶುಕ್ರವಾರ (ಡಿ. 6) ಮಧ್ಯಾಹ್ನ ಶ್ವೇತಾ ಹಾಗೂ ಅನುಷಾ ಮೇಲೆ ಶರತ್‌ ಆ್ಯಸಿಡ್ ಎರಚಿದ್ದ. ಶ್ವೇತಾ ಅವರ ಹೇಳಿಕೆ ಆಧರಿಸಿ ಶರತ್‌ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ಶನಿವಾರ ಮಧ್ಯಾಹ್ನ ಚಂದ್ರಾಲೇಔಟ್‌ ಠಾಣೆ ವ್ಯಾಪ್ತಿಯ ಸಂಬಂಧಿಕರ ಮನೆಗೆ ಹೋಗಿದ್ದ ಆರೋಪಿ, ಅಲ್ಲಿಯೇ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಅವರು ತಿಳಿಸಿದರು.

ADVERTISEMENT

ಆಗಿದ್ದೇನು?: ‘ವಿಜಯನಗರ ಬಳಿಯ ಟೆಲಿಕಾಂ ಲೇಔಟ್‌ನ ಶ್ವೇತಾ ಅವರನ್ನು ಎರಡು ವರ್ಷಗಳ ಹಿಂದೆ ಶರತ್‌ ಜೊತೆ ಮದುವೆ ಮಾಡಿಕೊಡಲಾಗಿತ್ತು. ಖಾಸಗಿ ಕಂಪನಿಯಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಮದುವೆಯಾದ ಕೆಲವು ತಿಂಗಳ ಬಳಿಕ ದಂಪತಿ ನಡುವೆ ಕಲಹ ಶುರುವಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಪತಿ, ಆತನ ತಂದೆ–ತಾಯಿ ಕಿರುಕುಳದಿಂದ ಬೇಸತ್ತ ಶ್ವೇತಾ, ಗಂಡನ ಮನೆ ತೊರೆದು ತವರು ಮನೆಗೆ ಬಂದು ಉಳಿದುಕೊಂಡಿದ್ದರು. ಅದಾದ ಬಳಿಕವೂ ಆರೋಪಿ ಕರೆ ಮಾಡಿ ಕಿರುಕುಳ ನೀಡಲಾರಂಭಿಸಿದ್ದ. ತವರು ಮನೆಗೂ ಬಂದು ಆಗಾಗ ಬಂದು ಗಲಾಟೆ ಮಾಡಿ ಹೋಗುತ್ತಿದ್ದ.’

‘ಆ್ಯಸಿಡ್ ಬಾಟಲಿ ಸಮೇತ ಶುಕ್ರವಾರ (ಡಿ.6) ಮಧ್ಯಾಹ್ನ ಮನೆಗೆ ಬಂದಿದ್ದ ಆತ, ಪತ್ನಿ ಜೊತೆ ಜಗಳ ತೆಗೆದಿದ್ದ. ಅದನ್ನು ನಾದಿನಿ ಪ್ರಶ್ನಿಸಿದ್ದರು. ಅದೇ ಸಂದರ್ಭದಲ್ಲಿ ಆರೋಪಿ ಬ್ಯಾಗ್‌ನಲ್ಲಿದ್ದ ಬಾಟಲಿ ತೆಗೆದು ಪತ್ನಿ–ನಾದಿನಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಶನಿವಾರ ಮಧ್ಯಾಹ್ನ ಆತ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯಿತು. ಆತನ ತಂದೆ–ತಾಯಿಯಿಂದ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.