ADVERTISEMENT

ಬಲಪಂಥೀಯರ ಆಡಳಿತದಿಂದ ಗಂಡಾಂತರ: ದಿನೇಶ್‌ ಗುಂಡೂರಾವ್‌

ಚುನಾವಣಾ ಚಿಂತನಾ ಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 20:00 IST
Last Updated 2 ಮಾರ್ಚ್ 2019, 20:00 IST
ಸಭೆಯಲ್ಲಿ ಸಂಸದ ವಿವೇಕ್ ತಂಖಾ ಅವರೊಂದಿಗೆ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ್  ಚರ್ಚಿಸಿದರು. ದಿನೇಶ್ ಗುಂಡೂರಾವ್ ಇದ್ದರು –ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಸಂಸದ ವಿವೇಕ್ ತಂಖಾ ಅವರೊಂದಿಗೆ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ಅಧ್ಯಕ್ಷ ಸಿ.ಎಂ.ಧನಂಜಯ್  ಚರ್ಚಿಸಿದರು. ದಿನೇಶ್ ಗುಂಡೂರಾವ್ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬಲಪಂಥೀಯರ ಆಡಳಿತ ಮತ್ತೆ ಮುಂದುವರಿದರೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ. ಬಲಪಂಥೀಯ ಚಿಂತನೆ ಹಿನ್ನೆಲೆಯಲ್ಲಿಯುವಜನರ‌ನ್ನು ದಿಕ್ಕುತಪ್ಪಿಸುವ ಯತ್ವ ನಡೆಯುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ಆತಂಕ ವ್ಯಕ್ತಪಡಿಸಿದರು.

ಕೆಪಿಸಿಸಿಯ ಕಾನೂನು ಮತ್ತು ಹಕ್ಕುಗಳ ವಿಭಾಗದ ಆಶ್ರಯದಲ್ಲಿ‌ ಆಯೋಜಿಸಿದ್ದ 'ಲೋಕಸಭಾ ಚುನಾವಣಾ ಚಿಂತನಾ ಸಭೆ'ಯಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳುಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದರೆ ಅವರನ್ನು ದಮನ ಮಾಡುವ ಹುನ್ನಾರ ನಡೆಸುತ್ತಾರೆ. ಅಲ್ಲದೆ, ಅವರಿಗೆ ದೇಶದ್ರೋಹ ಪಟ್ಟಕಟ್ಟಿ ಅಪರಾಧ ಪ್ರಕರಣ ದಾಖಲಿಸುತ್ತಾರೆ. ಗೌರಿ ಲಂಕೇಶ್, ಎಂ.ಎಂ. ಕಲಬುರ್ಗಿ ಸೇರಿದಂತೆ ಹಲವರ ಹತ್ಯೆಗಳಿಗೆ ಅವರ ಕುಮ್ಮಕ್ಕಿದ್ದು, ಜನರಿಗೆ ರಕ್ಷಣೆಯೇ ಇಲ್ಲದಂತಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಕಾನೂನು ಉಲ್ಲಂಘಿಸುವವರಿಗೆ ದೇಶಪ್ರೇಮ ಮತ್ತು ಧರ್ಮದ ಹೆಸರಿನಲ್ಲಿ ಕುಮ್ಮಕ್ಕು ನೀಡಲಾಗುತ್ತಿದೆ. ಈ ಮೂಲಕ ಮೂಲಭೂತವಾದ‌ ರೀತಿಯಲ್ಲಿ ಹಿಂದೂ ಸಂಸ್ಕೃತಿಯನ್ನು ಹೇರಿಕೆ ಮಾಡಲು ಬಿಜೆಪಿ ಹೊರಟಿದೆ. ಹೀಗೆ ಮುಂದುವರಿದರೆ ಭಾರತದ ಸಂಸ್ಕೃತಿ ಛಿದ್ರವಾಗಲಿದೆ’ ಎಂದು‌ ಕಳವಳ ವ್ಯಕ್ತಪಡಿಸಿದರು.

‘ಮೋದಿ ಅಧಿಕಾರಕ್ಕೆ ಬಂದ ನಂತರ ಐ.ಟಿ, ಇ.ಡಿ, ಸಿಬಿಐನಂಥ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡರು. ಸಂಘ ಪರಿವಾರದ ಮೂಲಕ ಪ್ರಜಾಪ್ರಭುತ್ವ ನಾಶಪಡಿಸಿ ಸರ್ವಾಧಿಕಾರ ಆಡಳಿತ ನಡೆಸಿದ ಬಿಜೆಪಿಗೆ ಮತ್ತೊಮ್ಮೆ ಅಧಿಕಾರ ನೀಡುವುದು ಸರಿಯೇ’ ಎಂದು ಪ್ರಶ್ನಿಸಿದರು. ‘ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸುವಷ್ಟರ ಮಟ್ಟಿಗೆ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ’ ಎಂದೂ ಕಿಡಿಕಾರಿದರು.

ಸಂಸದ ವಿವೇಕ್ ಕೆ. ತಂಖಾ, 'ಮೋದಿ ಅವರು ಮಾಧ್ಯಮಗಳನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ ಎಂದರೆ ಕಳೆದೆರಡು ದಿನಗಳಿಂದ ಹುತಾತ್ಮರಾದ ಐವರು ಯೋಧರ ಕುರಿತು ಒಂದು ಸಣ್ಣ ಸುದ್ದಿ ಬಿತ್ತರವಾಗಿಲ್ಲ. ಅಭಿನಂದನ್ ಬಿಡುಗಡೆ ಸುದ್ದಿ ಮಾತ್ರ ದೊಡ್ಡದಾಗಿ ಬಿಂಬಿತವಾಗುವಂತೆ ಮಾಡಿದರು. ಈಗ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ತಿಳಿಸಿದರು.

ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ‘ದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಜನ ಭಯದಿಂದ ಬದುಕಿದ್ದಾರೆ. ಅದು ಮತ್ತೊಮ್ಮೆ ಪುನರಾವರ್ತನೆ ಆಗುವುದು ಬೇಡ’ ಎಂದು ಮನವಿ ಮಾಡಿದರು.

*ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬದಲಾದರೆ ಮಾತ್ರ ಈ ದೇಶದಲ್ಲಿ ನ್ಯಾಯಮೂರ್ತಿಗಳು ಹಾಗೂ ವಕೀಲರಿಗೆ ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸಲು ಸಾಧ್ಯ
–ಜಿ. ವಿವೇಕ್ ಕೆ. ತಂಖಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.