ADVERTISEMENT

ಯಾರ ಕೈಗೂ ಸಿಗದ, ಯಾರಿಗೂ ಕಾಣದ ಬಿಸಿಲು ಕುದುರೆಯಂಥ ಬಜೆಟ್‌: ಡಿ.ಕೆ.ಶಿವಕುಮಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಫೆಬ್ರುವರಿ 2023, 10:09 IST
Last Updated 17 ಫೆಬ್ರುವರಿ 2023, 10:09 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ಕರ್ನಾಟಕ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಈ ಬಜೆಟ್‌ ಬಿಸಿಲು ಕುದುರೆಯಿದ್ದಂತೆ. ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು ಎಂದು ಪ್ರತಿಕ್ರಿಯಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ವಿಧಾನಸಭೆಯಲ್ಲಿ ಬಜೆಟ್‌ ಮಂಡಿಸಿದ್ದಾರೆ.

ಬಜೆಟ್‌ ಕುರಿತು ಸರಣಿ ಟ್ವೀಟ್ ಮಾಡಿರುವ ಡಿ.ಕೆ. ಶಿವಕುಮಾರ್, ಬಿಜೆಪಿಯವರ ಡಬಲ್‌ ಇಂಜಿನ್‌ ಕೆಟ್ಟು ನಿಂತು ಹೊಗೆ ಬರುತ್ತಿದೆ. ಬೊಮ್ಮಾಯಿ ಅವರು ತಾವೂ ಒಂದು ಬಜೆಟ್‌ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳಲು ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ. ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು’ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

‘ಪ್ರತೀ ಮಹಿಳೆಗೆ ₹2 ಸಾವಿರ ನೀಡುವುದಾಗಿ ದೊಡ್ಡದಾಗಿ ಜಾಹೀರಾತು ನೀಡಿದ್ದ ಬಿಜೆಪಿ ಸರ್ಕಾರ ಅದನ್ನು ₹500ಕ್ಕೆ ಮೊಟಕುಗೊಳಿಸಿದ್ದು ಏಕೆ? ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ, ಬೆಲೆ ಏರಿಕೆಗೆ ಪರಿಹಾರ, ಕಾರ್ಮಿಕರು, ಉದ್ಯೋಗದಾತರನ್ನು ಉಳಿಸುವ ಪ್ರಯತ್ನ ಖಂಡಿತ ಮಾಡಿಲ್ಲ. ದೂರದೃಷ್ಟಿಯಿಲ್ಲದ ಬಜೆಟ್‌ ಇದಾಗಿದೆ’ ಎಂದು ಟೀಕಿಸಿದ್ದಾರೆ.

‘ರಾಮನಗರದಲ್ಲಿ ರಾಮಮಂದಿರ ಕಟ್ಟುವುದಾಗಿ ತಿಳಿಸಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌, ಮೊದಲು ಅವರ ಪಕ್ಷದ ಕಚೇರಿ ಕಟ್ಟಲು ಹೇಳಿ’ ಎಂದು ತಿರುಗೇಟು ನೀಡಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.