ADVERTISEMENT

ಚುನಾವಣೆ ದಿನಾಂಕ ಪ್ರಕಟ: ರಾಜ್ಯದಲ್ಲಿ ಪ್ರಗತಿಪರ ಅಲೆ ಶುರುವಾಗಿದೆ ಎಂದ ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮಾರ್ಚ್ 2023, 10:18 IST
Last Updated 29 ಮಾರ್ಚ್ 2023, 10:18 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಇಂದು ಪ್ರಕಟಿಸಿದೆ.

ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು, ಫಲಿತಾಂಶ ಹೊರಬೀಳಲಿದೆ.

ಚುನಾವಣೆ ದಿನಾಂಕ ಪ್ರಕಟ ಬೆನ್ನಲೇ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಈಗ ಕರ್ನಾಟಕದಲ್ಲಿ ಹೊಸ ಪ್ರಗತಿಪರ ಭವಿಷ್ಯದ ಅಲೆ ಶುರುವಾಗಿದ್ದು, ರಾಜ್ಯದಲ್ಲಿ ಮೇ 10 ರಂದು ನಡೆಯಲಿರುವ ಚುನಾವಣೆಯನ್ನು ಉತ್ಸಾಹದಿಂದ ಸ್ವಾಗತಿಸುತ್ತೇವೆ, ಈ ಮೂಲಕ ಕಾಂಗ್ರೆಸ್ ಪಕ್ಷ ಜನರಿಗೆ ಅಭಿವೃದ್ಧಿ ಮತ್ತು ಪಾರದರ್ಶಕತೆಯನ್ನು ಮರಳಿ ನೀಡಲು ಸಜ್ಜಾಗಿದೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಏಪ್ರಿಲ್ 13ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಗೆ ಬರಲಿದೆ.

ಏಪ್ರಿಲ್ 20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

ರಾಜ್ಯದಲ್ಲಿ 5.22 ಕೋಟಿ ಮತದಾರರರಿದ್ದು, 2,62,42,561 ಪುರುಷ ಮತದಾರರು, 2,59,26,319 ಮಹಿಳಾ ಮತದಾರರು ಇದ್ದಾರೆ.

ಇದರಲ್ಲಿ 9,17,241 ಮೊದಲ ಬಾರಿ ಮತದಾರರು, 80 ವರ್ಷ ಮೇಲ್ಪಟ್ಟ 12,15,763 ಮತದಾರರು. ದಿವ್ಯಾಂಗರು 5,55,073 ಮತದಾರರು, 4,699 ತೃತೀಯ ಲಿಂಗಿ ಮತದಾರರು ಇದ್ದಾರೆ.

80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದಲ್ಲಿ ಈ ಬಾರಿ ಒಟ್ಟು 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 24,063 ನಗರ ಪ್ರದೇಶದಲ್ಲಿ, 34,219 ಗ್ರಾಮೀಣ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ. 12 ಸಾವಿರ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಯುವಕರಿಗಾಗಿ 224 ಪ್ರತ್ಯೇಕ ಮತಗಟ್ಟೆ, ಮಹಿಳೆಯರಿಗಾಗಿ 1320 ಮತಗಟ್ಟೆಗಳು ಸೇರಿ ಸರಾಸರಿ 883 ಮತದಾರರಿಗೊಂದು ಮತಗಟ್ಟೆ ನಿರ್ಮಾಣ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.