ADVERTISEMENT

ತಮ್ಮದು ಯಾವುದೇ ಪಕ್ಷದ ವಿರುದ್ಧದ ರಾಜಕಾರಣವಲ್ಲ: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 19:30 IST
Last Updated 12 ಮಾರ್ಚ್ 2021, 19:30 IST
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಿವಾಸಕ್ಕೆ ಶುಕ್ರವಾರ ತಮ್ಮ ಬೆಂಬಲಿಗರ ಜತೆ ಭೇಟಿನೀಡಿದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಸೇರ್ಪಡೆ ಕುರಿತು ಚರ್ಚಿಸಿದರು– ಪ್ರಜಾವಾಣಿ ಚಿತ್ರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ನಿವಾಸಕ್ಕೆ ಶುಕ್ರವಾರ ತಮ್ಮ ಬೆಂಬಲಿಗರ ಜತೆ ಭೇಟಿನೀಡಿದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಸೇರ್ಪಡೆ ಕುರಿತು ಚರ್ಚಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವುದು ಮಾತ್ರ ತಮ್ಮ ಉದ್ದೇಶ. ನಿರ್ದಿಷ್ಟವಾಗಿ ಯಾವುದೇ ಪಕ್ಷವನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಜೆಡಿಎಸ್‌ನ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಜತೆ ತಮ್ಮ ನಿವಾಸದಲ್ಲಿ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜೆಡಿಎಸ್‌ ಸೇರಿದಂತೆ ಯಾವುದೇ ಪಕ್ಷವನ್ನು ಗುರಿಯಾಗಿಸಿಕೊಂಡು ನಾನು ಕೆಲಸ ಮಾಡುತ್ತಿಲ್ಲ. ಆ ಪಕ್ಷ ಕೂಡ ರಾಜಕೀಯದಲ್ಲಿ ಇರಬೇಕು’ ಎಂದರು.

ದೊಡ್ಡ ನಾಯಕರನ್ನಷ್ಟೇ ಕಾಂಗ್ರೆಸ್‌ಗೆ ಆಹ್ವಾನಿಸುತ್ತಿಲ್ಲ. ಗ್ರಾಮ ಪಂಚಾಯಿತಿಗಳ ಮಟ್ಟದ ಕಾರ್ಯಕರ್ತರಿಂದ ರಾಜ್ಯಮಟ್ಟದ ನಾಯಕರವರೆಗೆ ಯಾರು ಬೇಕಾದರೂ ಕಾಂಗ್ರೆಸ್‌ ಸೇರಲು ಅವಕಾಶವಿದೆ. ಕಾಂಗ್ರೆಸ್‌ ಸಾಗರ ಇದ್ದಂತೆ. ಈ ಪಕ್ಷದಲ್ಲಿದ್ದು, ತೊರೆದು ಹೋದವರು ಕೂಡ ಮರಳಿ ಸಾಗರವನ್ನು ಸೇರಲು ಬರುತ್ತಿದ್ದಾರೆ ಎಂದು ಹೇಳಿದರು.

ADVERTISEMENT

‘ಎಸ್‌. ಬಂಗಾರಪ್ಪ ಅವರು ಆರಂಭದ ದಿನಗಳಲ್ಲೇ ನನ್ನನ್ನು ಗುರುತಿಸಿ ನಾಯಕತ್ವ ನೀಡಿ, ಬೆಳೆಸಿದವರು. ಅವರ ಗರಡಿಯಲ್ಲಿ ಬೆಳೆದು ಇಲ್ಲಿಯವರೆಗೂ ಬಂದಿದ್ದೇನೆ. ಬಂಗಾರಪ್ಪ ಅವರು ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬಿದ ನಾಯಕರಾಗಿದ್ದರು. ಅವರ ಮಗನಾದ ಮಧು ಬಂಗಾರಪ್ಪ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಲು ಹಲವು ದಿನಗಳಿಂದ ಪ್ರಯತ್ನಿಸುತ್ತಲೇ ಇದ್ದೆ. ಪಕ್ಷದ ವರಿಷ್ಠರ ಜತೆ ಮಧು ಅವರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಮತ್ತೆ ಅವರು ಪಕ್ಷಕ್ಕೆ ಮರಳುತ್ತಿರುವುದರಿಂದ ಬಲ ಬರಲಿದೆ’ ಎಂದರು.

ಮಧು ಬಂಗಾರಪ್ಪ ಮಾತನಾಡಿ, ‘ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರುವುದಷ್ಟೇ ಬಾಕಿ ಉಳಿದಿದೆ. ರಾಜ್ಯಕ್ಕೆ ಕಾಂಗ್ರೆಸ್‌ನ ಅವಶ್ಯಕತೆ ಇದೆ ಎಂಬುದು ಜನರ ಅನಿಸಿಕೆ. ಆ ಕಾರಣಕ್ಕಾಗಿ ಕಾಂಗ್ರೆಸ್‌ ಸೇರುತ್ತಿದ್ದೇನೆ’ ಎಂದರು.

ಬಂಗಾರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಅವಕಾಶ ಕೊಟ್ಟ ಪಕ್ಷ ಕಾಂಗ್ರೆಸ್‌. ಅಧಿಕಾರವೇ ಸಿಗಬೇಕು ಎಂಬುದಲ್ಲ, ಕಾಂಗ್ರೆಸ್‌ನಲ್ಲಿ ನಾಯಕರಾಗಿ ಬೆಳೆಯಲು ಅವಕಾಶವಿದೆ ಎಂದು ಹೇಳಿದರು.

ಮಧು ಬಂಗಾರಪ್ಪ ಅವರ ಕೆಲವು ಬೆಂಬಲಿಗರು ಕೆಪಿಸಿಸಿ ಅಧ್ಯಕ್ಷರ ಭೇಟಿಯ ವೇಳೆ ಜತೆಗಿದ್ದರು. ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಕೂಡ ಉಪಸ್ಥಿತರಿದ್ದರು.

ಗೀತಾ ಶಿವರಾಜ್‌ಕುಮಾರ್‌ ಕೂಡ ಕಾಂಗ್ರೆಸ್‌ನತ್ತ
‘ಅಕ್ಕ ಗೀತಾ ಶಿವರಾಜ್‌ಕುಮಾರ್‌ ಕೂಡ ಕಾಂಗ್ರೆಸ್‌ ಸೇರಲಿದ್ದಾರೆ. ಅವರು ಈ ವಿಚಾರದಲ್ಲಿ ಈಗಾಗಲೇ ಸಮ್ಮತಿ ನೀಡಿದ್ದಾರೆ’ ಎಂದು ಮಧು ಬಂಗಾರಪ್ಪ ತಿಳಿಸಿದರು.

ತಕ್ಷಣ ಮಧ್ಯ ಪ್ರವೇಶಿಸಿದ ಡಿ.ಕೆ. ಶಿವಕುಮಾರ್‌, ‘ಗೀತಾ ಅವರು ಸಾಧಾರಣ ಮಹಿಳೆಯಲ್ಲ. ಅವರಿಗೆ ಸರಿಯಾದ ಗೌರವ ನೀಡಬೇಕಾಗುತ್ತದೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ದೆಹಲಿಯ ನಾಯಕರ ಜತೆ ಚರ್ಚಿಸಿ ಕೆಲವು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ. ವರಿಷ್ಠರ ಜತೆ ಚರ್ಚಿಸಿ ಮುಂದಿನ ಪ್ರಕ್ರಿಯೆ ನಡೆಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.