ADVERTISEMENT

ಕೋವಿಡ್ ನಿಯಂತ್ರಣ ಮಾರ್ಗಸೂಚಿ ಬಿಜೆಪಿಗೆ ​ಅನ್ವಯಿಸುವುದಿಲ್ಲವೆ: ಡಿಕೆಶಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 16:59 IST
Last Updated 20 ಆಗಸ್ಟ್ 2021, 16:59 IST
ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ನಡೆದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆ ಸಮಾರಂಭದಲ್ಲಿ ಶಾಸಕ ದಿನೇಶ್ ಗುಂಡೂರಾವ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡ ಕೆ. ರೆಹಮಾನ್‌ ಖಾನ್, ಶಾಸಕ ಕೆ.ಜೆ. ಜಾರ್ಜ್‌ ಪಾಲ್ಗೊಂಡಿದ್ದರು

ಬೆಂಗಳೂರು:ಕಾಂಗ್ರೆಸ್‌ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಅನ್ವಯವಾಗುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಬಿಜೆಪಿಗೆ ಅನ್ವಯಿಸುವುದಿಲ್ಲವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಸಮಾರಂಭ ಆಯೋಜಿಸಲು ಯೋಚಿಸಿದ್ದೆವು. ಆದರೆ, ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಹೆಸರಿನಲ್ಲಿ ಅಧಿಕಾರಿಗಳು ಅನುಮತಿ ನೀಡಲಿಲ್ಲ. ಕೇಂದ್ರ ಸಚಿವರು ಬಿಜೆಪಿಯ ಜನಾಶೀರ್ವಾದ ಯಾತ್ರೆ ನಡೆಸುತ್ತಿದ್ದಾರೆ. ಅದಕ್ಕೆ ಯಾವ ನಿರ್ಬಂಧವೂ ಇಲ್ಲ’ ಎಂದರು.

ರಾಜಕೀಯ ಸಭೆ, ಸಮಾರಂಭ ಬೇಡ ಎಂಬ ಸಾಮಾನ್ಯ ನಿಯಮ ಪಾಲಿಸಲು ಕಾಂಗ್ರೆಸ್‌ ಪಕ್ಷ ಸಿದ್ಧವಿದೆ. ಆದರೆ, ಬಿಜೆಪಿಗೆ ಒಂದು ನಿಯಮ, ಇತರ ಪಕ್ಷಗಳಿಗೆ ಒಂದು ನಿಯಮ ಇದೆಯೆ? ಕೇಂದ್ರ ಸಚಿವರ ಪ್ರವಾಸದ ವೇಳೆ ಗಾಳಿಯಲ್ಲಿ ಗುಂಡು ಹಾರಿಸಲಾಗುತ್ತಿದೆ. ಮುಖ್ಯಮಂತ್ರಿವರು ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಟೀಕಿಸಿದರು.

ADVERTISEMENT

‘ನನ್ನ ವಿರುದ್ಧ ಕೆಲವರು ರಾಜೀವ್‌ ಗಾಂಧಿ ಅವರಿಗೆ ದೂರು ನೀಡಿದ್ದರು. ವಿವಾದಾತ್ಮಕ ನಾಯಕರಿಂದ ಅನುಕೂಲವಾಗುತ್ತದೆ ಮತ್ತು ಅವರು ಯಶಸ್ವಿಯಾಗುತ್ತಾರೆ ಎಂದು ಅವರು ಆಗಲೇ ಬೆಂಬಲಿಸಿದ್ದರು’ ಎಂದು ಶಿವಕುಮಾರ್‌ ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.