ADVERTISEMENT

ಅಕ್ಟೋಬರ್‌ನಲ್ಲಿ KPCC ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ– ಡಿ.ಕೆ ಶಿವಕುಮಾರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 8:51 IST
Last Updated 12 ಸೆಪ್ಟೆಂಬರ್ 2022, 8:51 IST
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್   

ರಾಯಚೂರು: 'ಬರುವ ಅಕ್ಟೋಬರ್ 16 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಭಾರತ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸುವುದಕ್ಕೆ ಸೋಮವಾರ ಬಂದಿದ್ದ ಅವರು, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

'ನಾನು ಅಧ್ಯಕ್ಷನಾಗಿ ಎರಡು‌ ವರ್ಷಗಳು ಪೂರ್ಣವಾಗುತ್ತಿದೆ. ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದು ಕೊನೆಯ ದಿನದಂದು ನಿರ್ಧಾರವಾಗುತ್ತದೆ. ಎಐಸಿಸಿ ಈಗಾಗಲೇ ಪ್ರಕಟಿಸಿದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ‌ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತಿದೆ' ಎಂದರು.

ADVERTISEMENT

ಕಾಂಗ್ರೆಸ್ ಹಗರಣಗಳನ್ನು ಬಯಲಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಚೆಗೆ ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ಕಳೆದ ಮೂರು ವರ್ಷಗಳಿಂದಲೂ ಬಿಜೆಪಿಯವರು ಹಗರಣ ಬಯಲಿಗೆ ಎಳೆಯುವುದಾಗಿ ಹೇಳುತ್ತಿದ್ದಾರೆ. ಹಗರಣ ಬಯಲು ಮಾಡುವುದು ಸರ್ಕಾರದ‌ ಕರ್ತವ್ಯ, ಇಂದಿನಿಂದಲೇ ಆ ಕೆಲಸ ಮಾಡಲಿ' ಎಂದರು.

'ಬಿಜೆಪಿಯವರಿಗೆ ನನ್ನ ಮೇಲೆ ಹಾಗೂ ಸಿದ್ದರಾಮಯ್ಯ ಅವರ ಮೇಲೆ ಪ್ರೀತಿ ಜಾಸ್ತಿ ಅದಕ್ಕೆ ನಮ್ಮ ಬಗ್ಗೆ ಹಗರಣದ ಆರೋಪ ಮಾಡುತ್ತಾರೆ' ಎಂದು ಹೇಳಿದರು.

'ಬಿಜೆಪಿಯವರ ಬೆದರಿಕೆಗೆ ನಾವು ಹೆದರುವುದಿಲ್ಲ. ದಿಟ್ಟತನದಿಂದ ಉತ್ತರಿಸುತ್ತೇವೆ. ಆದರೆ ಸಾಮಾಜಿಕ ಮಾಧ್ಯಮಗಳ ಬಿಜೆಪಿಯವರಿಗೆ ಪ್ರತಿದಿನ ಒಂದು ಪ್ರಶ್ನೆ ಕಳುತ್ತಿದ್ದೇವೆ. ಆ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸುತ್ತಿಲ್ಲ ಏಕೆ ಎಂಬುದನ್ನು ಮಾಧ್ಯದವರೇ ಅವರನ್ನು ಕೇಳಬೇಕು' ಎಂದರು.

ಅಕ್ಟೋಬರ್ 22 ಮತ್ತು 23 ರಂದು ಭಾರತ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆಗೆ ಬರಲಿದೆ. ಕೃಷ್ಣ ನದಿಯಿಂದ ತುಂಗಭದ್ರಾ ನದಿವರೆಗೂ ಪಾದಯಾತ್ರೆ ನಡೆಸುವರು. ರಾಹುಲ್ ಗಾಂಧಿಯವರು ತಮ್ಮ‌ ಕಬ್ಬಿಣದ ಕಾಲುಗಳ ಮೂಲಕ ಸಮಾಜದ ಎಲ್ಲ‌ ಜನರನ್ನು ಜೋಡಿಸುವ ಕೆಲಸವನ್ನು ಸೂಜಿಯ ರೀತಿಯಲ್ಲಿ ಹೊಲಿಯುವ ಮೂಲಕ ಮಾಡುತ್ತಿದ್ದಾರೆ.

ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ರಾಯಚೂರಿನ ಪಾದಯಾತ್ರೆಯಲ್ಲಿ ಭಾಗಹಿಸುವರು. ಹಾಲಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳು ಈ ಪಾದಯಾತ್ರೆಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.

'ಬಿಜೆಯವರು ಈ ಮೊದಲು ಜನೋತ್ಸವ ಮಾಡುವುದಾಗಿ ಹೇಳುತ್ತಿದ್ದರು. ಈಗ ಜನಸ್ಪಂದನೆ ಮಾಡಲು ಮುಂದಾಗಿದ್ದಾರೆ. ಇದುವರೆಗೂ ಜನಸ್ಪಂದನೆ ಮಾಡುವುದಕ್ಕೆ ಏಕೆ‌ ಆಗಿಲ್ಲವೆ' ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.