ADVERTISEMENT

ಲೋಕಸಭೆ ಚುನಾವಣೆ: ಟಿಕೆಟ್‌ಗಾಗಿ ‘ಕೈ’ ನಾರಿಯರ ಒತ್ತಡ

ಚರ್ಚೆಯಲ್ಲಿ ಹೆಬ್ಬಾಳಕರ, ವೀಣಾ, ಕಾಂತಾ, ಗೀತಾ, ತಬಸ್ಸುಮ್‌ ಹೆಸರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 19:42 IST
Last Updated 9 ಜನವರಿ 2019, 19:42 IST

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಸ್ಥಾನ ಮೀಸಲಿಡುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹೇರಲು ಕೆಪಿಸಿಸಿ ಮಹಿಳಾ ಘಟಕ ನಿರ್ಧರಿಸಿದೆ.

ಕನಿಷ್ಠ ಮೂರು ಕ್ಷೇತ್ರಗಳನ್ನು ತಮಗೆ ಬಿಟ್ಟು ಕೊಡುವಂತೆ ಮಹಿಳಾ ಘಟಕ ಈಗಾಗಲೇ ಬೇಡಿಕೆ ಮುಂದಿಟ್ಟಿದೆ. ಆದರೆ, ಪಕ್ಷದಲ್ಲಿರುವ ಮಹಿಳಾ ನಾಯಕರು ಮತ್ತು ಅವರ ಬೆಂಬಲಿಗರು ರಾಜ್ಯದ 28 ಸ್ಥಾನಗಳ ಪೈಕಿ ಐದು ಕ್ಷೇತ್ರಗಳನ್ನು ಮಹಿಳೆಯರಿಗೆ ನೀಡಬೇಕು ಎಂದು ಒತ್ತಾಯಿಸುತ್ತಿದೆ.

ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿಯಲು ಉತ್ಸುಕರಾಗಿದ್ದು, ಅವರಿಗೆ ಟಿಕೆಟ್‌ ನೀಡುವಂತೆ ಅವರ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಈ ಕ್ಷೇತ್ರವನ್ನು ಬಿಜೆಪಿಯ ಸುರೇಶ ಅಂಗಡಿ ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ಹೆಬ್ಬಾಳಕರ ಬೆಂಬಲಿಗರು ‘ಅಂಗಡಿ ಹಠಾವೊ, ಹೆಬ್ಬಾಳಕರ ಲಾವೊ’ ಎಂದು ಅಭಿಯಾನ ಆರಂಭಿಸಿದ್ದಾರೆ. 2014ರಲ್ಲಿ ನಡೆದ ಚುನಾವಣೆಯಲ್ಲಿ ಅಂಗಡಿ ವಿರುದ್ಧ ಹೆಬ್ಬಾಳಕರ 75,860 ಮತಗಳಿಂದ ಸೋಲು ಕಂಡಿದ್ದರು. ಲಿಂಗಾಯತ ಸಮುದಾಯದವರಾದ ಹೆಬ್ಬಾಳಕರ ಅವರಿಗೆ ಈ ಬಾರಿಯೂ ಟಿಕೆಟ್‌ ನೀಡಿದರೆ ಗೆಲುವು ಖಚಿತ ಎಂಬ ವಿಶ್ವಾಸ ಅವರ ಬೆಂಬಲಿಗದ್ದು.

ರಾಜಸ್ಥಾನದ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಅವರನ್ನು ಉತ್ತರಕನ್ನಡ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆದಿದೆ. ಎಐಸಿಸಿ ಸದಸ್ಯೆ ಕಾಂತಾ ನಾಯ್ಕ ವಿಜಯಪುರದಿಂದ ಟಿಕೆಟ್‌ ಬಯಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಪತ್ನಿ ಗೀತಾ ಅವರನ್ನು ಬೀದರ್‌ನಿಂದ, ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರ ಪತ್ನಿ ವೀಣಾ ಅವರನ್ನು ಬಾಗಲಕೋಟೆಯಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರ ಪತ್ನಿ ತಬಸ್ಸುಮ್‌ (ತಬು) ಅವರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ಇದೆ. ಆದರೆ, ಈ ಕ್ಷೇತ್ರದ ಮೇಲೆ ವಿಧಾನಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಕಣ್ಣು ನೆಟ್ಟಿದ್ದಾರೆ.

‘ಕನಿಷ್ಠ ಮೂರು ಕ್ಷೇತ್ರಗಳನ್ನು ಮಹಿಳೆಯರಿಗೆ ಬಿಟ್ಟುಕೊಡಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕೇವಲ 15 ಕ್ಷೇತ್ರಗಳನ್ನು ಮಾತ್ರ ಪಕ್ಷ ಮಹಿಳೆಯರಿಗೆ ನೀಡಿತ್ತು. ಇದು ರಾಹುಲ್‌ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.