ADVERTISEMENT

ಸಂಕಷ್ಟದ ಸಮಯದಲ್ಲಿ ಬಿಜೆಪಿಯಿಂದ ನಾಯಕತ್ವ ಬದಲಾವಣೆ ನಾಟಕ: ಈಶ್ವರ್ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 9:34 IST
Last Updated 17 ಜೂನ್ 2021, 9:34 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ    

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ನಿಂದ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ನಾಯಕತ್ವ ಬದಲಾವಣೆ ನಾಟಕ ಮಾಡುತ್ತಿದೆ. ಬಿಜೆಪಿಯವರಿಗೆ ಸ್ವಲ್ಪವೂ ಮಾನವೀಯತೆ ಇಲ್ಲವಾಗಿದೆ. ವೈಫಲ್ಯ ಮರೆಮಾಚಲು ಈ ನಾಟಕ ಮಾಡುತ್ತಿದ್ದು, ಇದು ಲಜ್ಜೆ ಗೆಟ್ಟ ಸರ್ಕಾರ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಖಂಡ್ರೆ , ‘ಕೊರೊನಾ, ಬ್ಲಾಕ್ ಫಂಗಸ್ ಭೀತಿ ನಡುವೆ, ಆದಾಯ ಇಲ್ಲದೆ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.

'ಬಿಜೆಪಿಯವರು ರೈತರಿಗೆ ಮರಣ ಶಾಸನ ಕಾಯ್ದೆ ತರುತ್ತಿದ್ದಾರೆ. ಕೊರೊನಾ ಹಾಗೂ ಸರ್ಕಾರದ ಮೋಸದಿಂದ ಜನ ರೋಸಿ ಹೋಗಿದ್ದಾರೆ. 15 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ರೈತರು ಫಸಲ್ ಭೀಮಾ ಕಂತು ಕಟ್ಟಿದ್ದರೂ ವಿಮೆ ಹಣ ಸಿಕ್ಕಿಲ್ಲ. ಖಾಸಗಿ ಕಂಪನಿಗಳಿಗೆ ಲಾಭ ಮಾಡಲು ಈ ರೀತಿ ಮಾಡಲಾಗುತ್ತಿದೆ' ಎಂದು ಟೀಕಿಸಿದರು.

ADVERTISEMENT

'ಸರ್ಕಾರ ಕೂಡಲೇ ಮುಂಗಾರು, ಹಿಂಗಾರು ಹಂಗಾಮಿನ ವಿಮೆ ಬಿಡುಗಡೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ನೀಡಬೇಕು. ಕಾಂಗ್ರೆಸ್‌ ಸರ್ಕಾರ ಇದ್ದಾಗ ಬಿತ್ತನೆ ಬೀಜ ಸಮಸ್ಯೆ ಎದುರಾಗಿರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಅವಧಿಯಲ್ಲಿ ಬಿತ್ತನೆ ಬೀಜ ಹಂಚಿಕೆಯಲ್ಲಿ ಸಮಸ್ಯೆಯಾಗಿದೆ. ಸೋಯಾಬೀನ್ ಬೀಜದ ಬೆಲೆ ದುಪ್ಪಟ್ಟಾಗಿದೆ' ಎಂದು ದೂರಿದರು.

ವಿಜಯೇಂದ್ರ ಹಸ್ತಕ್ಷೇಪ: ಜಲಸಂಪನ್ಮೂಲ ಇಲಾಖೆಯಲ್ಲಿ ಮುಖ್ಯಮಂತ್ರಿ ಪುತ್ರ ಬಿ.ವೈ. ವಿಜಯೇಂದ್ರ ಹಸ್ತಕ್ಷೇಪ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಖಂಡ್ರೆ, 'ಸರ್ಕಾರದ ಎಲ್ಲ ಇಲಾಖೆಯಲ್ಲಿ ಹಾಡಹಗಲೇ ದರೋಡೆ ನಡೆಸುತ್ತಿದೆ. ಈ ಬಗ್ಗೆ ಕಾನೂನು ರೀತಿಯಲ್ಲಿ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು.

'ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿದ್ದೇವೆ. ಅಧಿಕಾರ ದಾಹಕ್ಕಾಗಿ ಸರ್ಕಾರದಲ್ಲಿ ನಾಟಕ ನಡೆಯುತ್ತಿದೆ. ಬಿಜೆಪಿ ಸರ್ಕಾರವೇ ಇರಬಾರದು, ವಿಸರ್ಜನೆ ಮಾಡಬೇಕು. ರಾಜ್ಯದಲ್ಲೂ‌ ಸಾಕಷ್ಟು ರಾಜಕೀಯ ಬದಲಾವಣೆ ಆಗಲಿದೆ. ಕಾಂಗ್ರೆಸ್ ಈಗಾಗಾಲೇ ಮಾದರಿ ಸರ್ಕಾನೀಡಿದೆ. ಜನ ಮತ್ತೆ ಕಾಂಗ್ರೆಸ್‌ಗೆ ಅವಕಾಶ ನೀಡಬೇಕು' ಎಂದು ಖಂಡ್ರೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.