ADVERTISEMENT

ಕೆಪಿಸಿಎಲ್: ಮರು ಪರೀಕ್ಷೆಗೆ ಮೀನಮೇಷ, ಕಾದಿರುವ 44 ಸಾವಿರ ಅಭ್ಯರ್ಥಿಗಳು

ಜೆಇ, ಎಇ ಹುದ್ದೆಗಳಿಗೆ 2 ವರ್ಷದಿಂದ ಕಾದಿರುವ ಅಭ್ಯರ್ಥಿಗಳು

ವಿಜಯಕುಮಾರ್ ಎಸ್.ಕೆ.
Published 28 ಜುಲೈ 2019, 4:58 IST
Last Updated 28 ಜುಲೈ 2019, 4:58 IST
kpcl logo
kpcl logo   

ಬೆಂಗಳೂರು: ಕಿರಿಯ ಎಂಜಿನಿಯರ್ (ಜೆಇ) ಮತ್ತು ಸಹಾಯಕ ಎಂಜಿನಿಯರ್‌ (ಎಇ) ಹುದ್ದೆಗಳ ಭರ್ತಿಗೆ ಹೈಕೋರ್ಟ್‌ ಆದೇಶದಂತೆ ಮರು ಪರೀಕ್ಷೆ ನಡೆಸಲುಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) 6 ತಿಂಗಳಿಂದ ಮೀನಮೇಷ ಎಣಿಸುತ್ತಿದ್ದು, 44 ಸಾವಿರ ಅಭ್ಯರ್ಥಿಗಳು ಪರೀಕ್ಷೆಗಾಗಿ ಕಾದಿದ್ದಾರೆ.

288 ಜೆಇ, 296 ಎಇ, ಕೆಮಿಸ್ಟ್‌ ಮತ್ತು ಕೆಮಿಕಲ್‌ ಸೂಪರ್‌ವೈಸರ್‌ ಸೇರಿ 622 ಹುದ್ದೆಗಳ ನೇಮಕಾತಿಗೆ 2017ರ ಆಗಸ್ಟ್ 3ರಲ್ಲಿ ಕೆಪಿಸಿಎಲ್ ಅಧಿಸೂಚನೆ ಹೊರಡಿಸಿತ್ತು. 2018ರ ಜನವರಿ 21ರಂದು ಖಾಸಗಿ ಏಜೆನ್ಸಿ ಮೂಲಕ ನಡೆದ ಲಿಖಿತ ಪರೀಕ್ಷೆಗೆ ಸುಮಾರು 44,411‌ ಅಭ್ಯರ್ಥಿಗಳು ಹಾಜರಾಗಿದ್ದರು.

‘ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಮತ್ತು ಪರೀಕ್ಷೆ ನಡೆಸಲು‌ಅನುಸರಿಸಿರುವ ಕ್ರಮಗಳೇ ಅಕ್ರಮಗಳಿಗೆ ದಾರಿಮಾಡಿವೆ’ ಎಂದು ಆರೋಪಿಸಿ ಅಭ್ಯರ್ಥಿಗಳಲ್ಲಿ ಕೆಲವರು 2018ರ ಮಾರ್ಚ್‌ನಲ್ಲಿ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ್ದರು.

ADVERTISEMENT

‘ಆರ್‌.ಎಸ್.ಕುರ್ಮಿ ಆಬ್ಜೆಕ್ಟಿವ್ ಟೈಪ್ ಬುಕ್’ ಒಂದರಿಂದಲೇ ಶೇ 90ರಷ್ಟು ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಲಾ
ಗಿದೆ. ಅಲ್ಲದೇ ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕೆಪಿಸಿಎಲ್‌ ಅಧಿಕಾರಿಗಳು ಮತ್ತು ಸಂಬಂಧಿಕರ ಮಕ್ಕಳೇ ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಅಂಥವರಿಗೆ ಮಾಹಿತಿ ಸೋರಿಕೆಯಾಗಿರುವ ಸಾಧ್ಯತೆ ಇದೆ’ ಎಂದು ಆತಂಕ ವ್ಯಕ್ತಡಿಸಿದ್ದರು.

ದೂರು ಆಧರಿಸಿ ಕೆಪಿಸಿಎಲ್‌ನ ಅಂದಿನ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರನಾಯಕ ಅವರು ಮರು ಪರೀಕ್ಷೆಗೆ ಆದೇಶಿಸಿದ್ದರು. ಅಭ್ಯರ್ಥಿಗಳ ಮತ್ತೊಂದು ಗುಂಪು ಇದನ್ನು ಆಕ್ಷೇಪಿಸಿತ್ತು. ಇವರ ಪರವಾಗಿ ಎನ್.ಹರ್ಷ ಎಂಬುವರು ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.

ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವಲ್ಲಿ ಲೋಪವಾಗಿತ್ತು ಎಂಬುದನ್ನು ಸ್ವತಃ ಕೆಪಿಸಿಎಲ್‌ ನ್ಯಾಯಾಲಯದಲ್ಲಿ ಒಪ್ಪಿಕೊಂಡಿತ್ತು. ‘25 ಪ್ರಶ್ನೆಗಳಿಗೆ ತಲಾ ಎರಡೆರಡು ಸರಿ ಉತ್ತರಗಳಿವೆ. ಹೀಗಾಗಿ ಮರು ಪರೀಕ್ಷೆ ನಡೆಸುವುದು ಸೂಕ್ತ’ ಎಂದು ವಾದಿಸಿತ್ತು. 2019ರ ಫೆಬ್ರುವರಿ 1ರಂದು ತೀರ್ಪು ನೀಡಿದ ಹೈಕೋರ್ಟ್‌, ಮರು ಪರೀಕ್ಷೆ ನಡೆಸುವಂತೆ ಸೂಚಿಸಿದೆ.

ಬಳಿಕಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಪತ್ರ ಬರೆದಿರುವ ಕೆಪಿಸಿಎಲ್, ಪರೀಕ್ಷೆ ನಡೆಸಿ ಕೊಡು
ವಂತೆ ಕೋರಿದೆ. ಆದರೆ, ದಿನಾಂಕ ನಿಗದಿ ವಿಳಂಬಕ್ಕೆಕಾರ್ಯ ಒತ್ತಡದ ಕಾರಣವನ್ನು ಕೆಇಎ ನೀಡುತ್ತಿದೆ. ಹೀಗಾಗಿ ಅಭ್ಯರ್ಥಿಗಳು ಅತಂತ್ರರಾಗಿದ್ದಾರೆ.

‌‘ಹೈಕೋರ್ಟ್ ಆದೇಶ ನೀಡಿ 6 ತಿಂಗಳಾಗಿದೆ. ಪರೀಕ್ಷೆ ನಡೆಸುವಂತೆ ನಿಗಮದ ಅಧಿಕಾರಿಗಳಿಗೆ 30ಕ್ಕೂ ಹೆಚ್ಚು ಬಾರಿ ಮನವಿ ಸಲ್ಲಿಸಿದ್ದೇವೆ. ಪರೀಕ್ಷೆ ಬಳಿಕ ನಾವು ಆಯ್ಕೆಯಾಗುತ್ತೇವೋ, ಇಲ್ಲವೋ ಗೊತ್ತಿಲ್ಲ. ಆದರೆ, ಸರ್ಕಾರಿ ಉದ್ಯೋಗದ ಕನಸಿನೊಂದಿಗೆ ಎರಡು ವರ್ಷಗಳಿಂದ ಕೆಪಿಸಿಎಲ್ ಕಚೇರಿಗೆ ಅಲೆಯುತ್ತಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಭ್ಯರ್ಥಿಯೊಬ್ಬರು ಅಳಲು ತೋಡಿಕೊಂಡರು.

ವಿದ್ಯುತ್ ಪೂರೈಕೆ ಕಷ್ಟ ಎಂದಿದ್ದ ಕೆಪಿಸಿಎಲ್

‘ನಿಗಮದಲ್ಲಿ ಎಂಜಿನಿಯರ್‌ಗಳ ಕೊರತೆ ಇದೆ, ಆದಷ್ಟು ಬೇಗ ನೇಮಕಾತಿ ಪೂರ್ಣಗೊಳಿಸದಿದ್ದರೆ ರಾಜ್ಯಕ್ಕೆ ವಿದ್ಯುತ್ ಪೂರೈಸುವುದು ಕಷ್ಟವಾಗಲಿದೆ. ಕೂಡಲೇ ಪ್ರಕರಣ ಇತ್ಯರ್ಥಪಡಿಸುವಂತೆ ಕೆಪಿಸಿಎಲ್‌ ಅಧಿಕಾರಿಗಳು ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಆದರೀಗ ಅವರೇ ವಿಳಂಬ ಮಾಡುತ್ತಿದ್ದಾರೆ’ ಎಂಬುದು ಅಭ್ಯರ್ಥಿಗಳ ಆರೋಪ.

‘ಕೆಇಎ ಕಡೆಗೆ ಬೊಟ್ಟು ಮಾಡಿಕೊಂಡು ಕೆಪಿಸಿಎಲ್ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.ಈ ಬಗ್ಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಪ್ರಶ್ನೆ ಮಾಡಿದರೆ ಗದರಿಸಿ ಕಳುಹಿಸುತ್ತಾರೆ’ ಎಂದು ಅಭ್ಯರ್ಥಿಗಳ ಪರ ಹೋರಾಟ ನಡೆಸುತ್ತಿರುವ ಧರ್ಮರಾಜ್ ‘‍ಪ್ರಜಾವಾಣಿ’ಗೆ ತಿಳಿಸಿದರು.

*ಪರೀಕ್ಷೆ ನಡೆಸಿಕೊಡುವಂತೆ ಕೆಇಎಗೆ ಪತ್ರ ಬರೆದಿದ್ದೇವೆ. ಪರೀಕ್ಷಾ ಕೇಂದ್ರಗಳ ಲಭ್ಯತೆ ನೋಡಿಕೊಂಡು ಅವರು ದಿನಾಂಕ ನಿಗದಿ ಮಾಡಲಿದ್ದಾರೆ

– ವಿ.ಪೊನ್ನುರಾಜ್, ಎಂ.ಡಿ, ಕೆಪಿಸಿಎಲ್

*ಸಿಇಟಿ ಕೌನ್ಸೆಲಿಂಗ್‌ ಇರುವ ಕಾರಣ ಕಾರ್ಯ ಒತ್ತಡವಿದೆ, ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ನಡೆಸಲು ಪರಿಶೀಲನೆ ನಡೆಸುತ್ತಿದ್ದೇವೆ

– ಆರ್.ಗಿರೀಶ್, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.