ADVERTISEMENT

ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆಗಳ ವಿರೋಧಿಸಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 15:49 IST
Last Updated 7 ಫೆಬ್ರುವರಿ 2026, 15:49 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ಸಾಹಿತಿ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಒತ್ತಾಯಿಸಿದರು.

ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿಯು ಶನಿವಾರ ಆಯೋಜಿಸಿದ್ದ ‘ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆಗಳ ಮುಚ್ಚುವ ನಿರ್ಧಾರದ ವಿರುದ್ಧ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ADVERTISEMENT

‘ಬಡ ಕುಟುಂಬದ ಮಕ್ಕಳು ಈಗಲೂ ಸರ್ಕಾರಿ ಶಾಲೆಗಳಿಗೇ ಹೋಗುತ್ತಿದ್ದಾರೆ. ಆ ಶಾಲೆಗಳನ್ನು ಮುಚ್ಚಿದರೆ, ಮಕ್ಕಳು ಎಲ್ಲಿಗೆ ಹೋಗಬೇಕು? ಹೆಣ್ಣುಮಕ್ಕಳಂತು 5–7 ಕಿ.ಮೀ.ದೂರದ ಕೆಪಿಎಸ್‌ ಮತ್ತು ಕೆಪಿಎಸ್‌ ಮ್ಯಾಗ್ನೆಟ್‌ ಶಾಲೆಗಳಿಗೆ ನಡೆದುಕೊಂಡು ಹೋಗುವುದು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳನ್ನು ಮುಚ್ಚಿದರೆ, ಈ ಮಕ್ಕಳಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಲೇಖಕಿ ಸಬಿಹಾ ಭೂಮಿ ಗೌಡ, ‘ಶಿಕ್ಷಣವು ವೈಜ್ಞಾನಿಕ ಮನೋಭಾವದ ಮೂಲಕ ಮೌಢ್ಯ ಹಾಗೂ ದಾಸ್ಯವನ್ನು ಹೋಗಲಾಡಿಸುತ್ತದೆ. ಕೆಪಿಎಸ್‌ ಮ್ಯಾಗ್ನೆಟ್ ಶಾಲೆಗಳ ಮೂಲಕ, ಅಂತಹ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಎನ್‌.ರಾಜಶೇಖರ್‌, ‘ಊರಿನಾಚೆ ಇರುವ ಮ್ಯಾಗ್ನೆಟ್‌ ಶಾಲೆಗಳಿಗೆ ಉಚಿತ ಬಸ್ ಒದಗಿಸಲಾಗುತ್ತಿದೆ ಎಂಬುದು ಸುಳ್ಳು. ಅದರ ಸಂಪೂರ್ಣ ಹೊಣೆಯನ್ನು ಎಸ್‌ಡಿಎಂಸಿ ಮತ್ತು ಪೋಷಕರ ತಲೆಗೆ ಕಟ್ಟಲಾಗಿದೆ’ ಎಂದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರೆಗೋಡು, ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ, ಎಐಡಿಎಸ್ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಸಮಾವೇಶದಲ್ಲಿ ವಿಷಯ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.