ADVERTISEMENT

ಕೆಪಿಎಸ್‌ಸಿ: ಪರಿಶಿಷ್ಟರಿಗೆ ನ್ಯಾಯ

ಸಚಿವ ಸಂಪುಟ ಸಭೆಯಲ್ಲಿ ಸಿಟ್ಟು–ಸೆಡವು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 20:15 IST
Last Updated 19 ನವೆಂಬರ್ 2018, 20:15 IST
   

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು ಮೆರಿಟ್ ಆಧಾರದಲ್ಲಿ ಸಾಮಾನ್ಯ ವರ್ಗದಡಿ ಪ್ರವೇಶ ಪಡೆಯಲು ಇರುವ ಅವಕಾಶವನ್ನು ಮುಂದು
ವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೆಪಿಎಸ್‌ಸಿ ನೇಮಕಾತಿ ನಿಯಮ ಬದಲಾವಣೆ ಮಾಡಲು ಮುಂದಾಗಿದ್ದ ಸರ್ಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಪ್ರತಿನಿಧಿಸುವ ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಪಕ್ಷದ ನಾಯಕರು ಇದನ್ನು ಟೀಕಿಸಿದ್ದರು.

ಸೋಮವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಕೃಷ್ಣ ಬೈರೇಗೌಡ, ಕೆಪಿಎಸ್‌ಸಿಯ ನಿಯಮಗಳಲ್ಲಿ ಬದಲಾವಣೆ ಮಾಡುವ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಪರಿಶಿಷ್ಟ ಜಾತಿ, ಪಂಗಡದವರ ಹಿತ ಕಾಯಲು ಅಗತ್ಯವಿದ್ದರೆ ಕಾನೂನು ಬದಲಾವಣೆ ಮಾಡುವ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ’ ಎಂದರು.

ADVERTISEMENT

ಸಚಿವ ಸಂಪುಟ ಸಭೆಯಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಈ ವಿಷಯವನ್ನು ಪ್ರಸ್ತಾಪಿಸಿದರು. ‘ಒಂದು ವೇಳೆ ನಿಯಮ ಬದಲಾವಣೆ ಮಾಡಿದರೆ ಪರಿಶಿಷ್ಟ ವಿರೋಧಿ ಸರ್ಕಾರ ಎಂಬ ಹಣೆಪಟ್ಟಿ ಬರುತ್ತದೆ. ಇದರಿಂದ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ’ ಎಂದೂ ಈ ಸಚಿವರು ಎಚ್ಚರಿಸಿದರು.

2017ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಹೈಕೋರ್ಟ್‌ ನೀಡಿದ್ದ ತೀರ್ಪು ಅನ್ನು ಪಾಲಿಸುವ ಬಗ್ಗೆ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಪತ್ರ ಬರೆದಿದ್ದ ಕೆಪಿಎಸ್‌ಸಿ ಕಾರ್ಯದರ್ಶಿ ಆರ್.ಆರ್.ಜನ್ನು ಸ್ಪಷ್ಟೀಕರಣ ಕೇಳಿದ್ದರು. ಈ ಕುರಿತು ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಕೇಳಿತ್ತು.

‘ಹೈಕೋರ್ಟ್‌ ಆದೇಶದ ಪ್ರಕಾರ ಸಾಮಾನ್ಯ ವರ್ಗದಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಲು ಸಾಧ್ಯವಿಲ್ಲ’ ಎಂದು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ನೀಡಿದ್ದರು. ಅದರ ಆಧಾರದಲ್ಲಿ ನ. 3ರಂದು ಕೆಪಿಎಸ್‌ಸಿಗೆ ಸರ್ಕಾರ ಪತ್ರ ಬರೆದಿತ್ತು.

‘ಇದನ್ನು ಪ್ರಸ್ತಾಪಿಸಿದ ಸಚಿವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

‘ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದು ಮುಖ್ಯ ಕಾರ್ಯದರ್ಶಿ ಉತ್ತರಿಸಿದ್ದಾರೆ. ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಉತ್ತರಿಸಿದರು. ‘ಮುಖ್ಯಮಂತ್ರಿ ಗಮನಕ್ಕೂ ತಾರದೆ ಅಧಿಕಾರಿಗಳು ನಿರ್ಧಾರಕ್ಕೆ ಬಂದಿದ್ದು ಹೇಗೆ. ಇದು ದಾಷ್ಟ್ಯದ ಪರಮಾವಧಿ’ ಎಂದು ಸಚಿವರು ಕಿಡಿಕಾರಿದರು.

‘ಹೈಕೋರ್ಟ್‌ ಆದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಹಿಂದೆ ಇರುವವರು ಯಾರು ಎಂಬುದು ಗೊತ್ತಾಗಬೇಕು’ ಎಂದೂ ಪ್ರಶ್ನಿಸಿದ್ದಾಗಿ ಗೊತ್ತಾಗಿದೆ.

ಕೆಪಿಎಸ್‌ಸಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಕ್ರಮದ ಬಗ್ಗೆ ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ವಿರೋಧ ಸೂಚಿಸಿದ್ದರು. ಬಳಿಕ, ಪ್ರಿಯಾಂಕ್‌ ಖರ್ಗೆ, ಪುಟ್ಟರಂಗ ಶೆಟ್ಟಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು.

ಈಗ ಇರುವ ನಿಯಮವೇನು?

ಈಗ ಇರುವ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೆರಿಟ್ ಇದ್ದರೆ, ಸಾಮಾನ್ಯ ಪ್ರವರ್ಗದಡಿ ನಿಗದಿಯಾಗಿರುವ ಹುದ್ದೆಗಳಲ್ಲಿ ನೇಮಕಾತಿಯಾಗುವ ಅವಕಾಶ ಇದೆ. ಪರಿಶಿಷ್ಟರಿಗೆ ಮೀಸಲಾದ ಹುದ್ದೆಗಳ ಜತೆಗೆ, ಸಾಮಾನ್ಯ ವರ್ಗದ ಹುದ್ದೆಗಳಲ್ಲೂ ಅವಕಾಶ ಸಿಗುತ್ತಿರುವುದರಿಂದ ಪ್ರತಿಭಾವಂತರಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ.

ಇದರಲ್ಲಿ ಬದಲಾವಣೆ ಮಾಡುವ ಯತ್ನ ನಡೆದಿತ್ತು. ಹೀಗೆ ಮಾಡಿದ್ದರೆ, ಪರಿಶಿಷ್ಟ ಜಾತಿ, ಪಂಗಡ ಹಾಗು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಆಯಾ ಜಾತಿಗೆ ಮೀಸಲಾದ ಹುದ್ದೆಗಳ ನೇಮಕಾತಿಗಳಲ್ಲಿ ಮಾತ್ರ ನೌಕರಿ ಪಡೆಯಲು ಸಾಧ್ಯವಾಗುತ್ತಿತ್ತು. ಇದರಿಂದ ತಳ ಸಮುದಾಯದ ಪ್ರತಿಭಾವಂತರಿಗೆ ಅವಕಾಶ ಕೈತಪ್ಪುತ್ತಿತ್ತು.

*ನೇಮಕಾತಿ ವೇಳೆ ಆಯ್ಕೆ ವಿಧಾನ ಬದಲಿಸಲು ನಿಯಮದಲ್ಲಿ ತಿದ್ದುಪಡಿ ಮಾಡಬೇಕು. ಕಾನೂನು ವ್ಯಾಪ್ತಿಯಲ್ಲಿ ಚರ್ಚಿಸಿ, ಚಿಂತನೆ ನಡೆಸುವಂತೆ ಸೂಚಿಸಿದ್ದೇನೆ.
- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

*ಸಾಮಾಜಿಕ ನ್ಯಾಯ ಕಾಪಾಡುವುದು ನಮ್ಮ ಸರ್ಕಾರದ ಹೊಣೆ. ಈ ದಿಸೆಯಲ್ಲಿ ಧ್ವನಿ ಎತ್ತಿದ್ದೇನೆ.

-ಪ್ರಿಯಾಂಕ್‌ ಖರ್ಗೆ, ಸಮಾಜ ಕಲ್ಯಾಣ ಸಚಿವ

*ಪರಿಶಿಷ್ಟರ ಹಿತ ಕಾಯಲು ಕಾನೂನು ಇಲಾಖೆಯ ಸಲಹೆ ಪಡೆದು ಕಾನೂನಿನಲ್ಲಿ ಬದಲಾವಣೆ ಮಾಡಬೇಕೇ ಎಂಬ ಬಗ್ಗೆ ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ
-ಕೃಷ್ಣ ಬೈರೇಗೌಡ, ಕಾನೂನು ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.