ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ 384 ಹುದ್ದೆಗಳಿಗೆ ನೇಮಕಾತಿಗೆ ಬುಧವಾರ ಬೆಳಿಗ್ಗೆ ನಡೆದ ಪತ್ರಿಕೆ 3 ‘ಸಾಮಾನ್ಯ ಅಧ್ಯಯನ–2’ ಮತ್ತು ಮಧ್ಯಾಹ್ನ ನಡೆದ ಪತ್ರಿಕೆ 4 ‘ಸಾಮಾನ್ಯ ಅಧ್ಯಯನ–3’ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಅನುಮಾನ ವ್ಯಕ್ತಪಡಿಸಿ ಕೆಪಿಎಸ್‌ಸಿ ಕಾರ್ಯದರ್ಶಿಗೆ ಕೆಲವು ಅಭ್ಯರ್ಥಿಗಳು ದೂರು ನೀಡಿದ್ದಾರೆ.
ಕೋರ್ಟ್ ಆದೇಶದ ಅನ್ವಯ ಮುಖ್ಯಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಬೆಂಗಳೂರಿನ ಮೈಸೂರು ರಸ್ತೆಯ ಕಸ್ತೂರಬಾ ನಗರದ ಬಿಬಿಎಂಪಿ ಪಿಯು ಸಂಯೋಜಿತ ಕಾಲೇಜಿಗೆ ಬಂದಿದ್ದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂದು ಅಭ್ಯರ್ಥಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
‘ಪ್ರಶ್ನೆಪತ್ರಿಕೆಯ ಲಕೋಟೆಯ ಒಳಗಿನ ಹಳದಿ ಸ್ಟಿಕ್ಕರ್ ಅನ್ನು ಮೊದಲೇ ತೆರೆಯಲಾಗಿತ್ತು. ಅದನ್ನು ನಂತರ ಗಮ್‌ನಿಂದ ಅಂಟಿಸಲಾಗಿದೆ. ಒಂದೇ ಪ್ರಶ್ನೆಪತ್ರಿಕೆಗೆ ಎರಡೆರಡು ವಿಭಿನ್ನ ಹಳದಿ ಸ್ಟಿಕ್ಕರ್ ಲಗತ್ತಿಸಿರುವುದೂ ಕಂಡುಬಂದಿದೆ. ಈ ವಿಷಯವನ್ನು ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು, ಪ್ರಾಂಶುಪಾಲರು ದೃಢೀಕರಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಭಾಷಾಂತರ ದೋಷ: ಪತ್ರಿಕೆ 3 ‘ಸಾಮಾನ್ಯ ಅಧ್ಯಯನ–2’ ಪ್ರಶ್ನೆಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿದ ಪ್ರಶ್ನೆಯಲ್ಲಿ ಭಾಷಾಂತರ ದೋಷ ಕಂಡುಬಂದಿದೆ. ಪ್ರಶ್ನೆಪತ್ರಿಕೆಯ 9ನೇ ಪ್ರಶ್ನೆಯಲ್ಲಿ ‘ಪಬ್ಲಿಕ್ ಸರ್ವೀಸ್ ಕಮಿಷನ್’ ಎಂದಿರುವುದನ್ನು ‘ಲೋಕಸೇವಾ ಆಯೋಗಗಳು’ ಎಂದು ಭಾಷಾಂತರಿಸುವ ಬದಲು ‘ಸಾರ್ವಜನಿಕ ಸೇವಾ ಆಯೋಗಗಳು’ ಎಂದು ಮಾಡಲಾಗಿದೆ. 10ನೇ ಪ್ರಶ್ನೆಯಲ್ಲಿ ಇಂಗ್ಲಿಷ್‌ನಲ್ಲಿ ‘ಪಿಎಂ ಗರೀಬ್ ಕಲ್ಯಾಣ್ ಯೋಜನಾ’ ಎಂದಿರುವುದು ಕನ್ನಡಕ್ಕೆ ಭಾಷಾಂತರಗೊಂಡಾಗ ‘ಪ್ರಧಾನ ಮಂತ್ರಿ ಗ್ರಾಮೀಣ ಕಲ್ಯಾಣ ಯೋಜನೆಗಳು’ ಎಂದಾಗಿದೆ. ಈ ಬಗ್ಗೆಯೂ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.