ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗವನ್ನು (ಕೆಪಿಎಸ್‌ಸಿ) ಸ್ವಚ್ಛಗೊಳಿಸುವಲ್ಲಿ ಸರ್ಕಾರ ನಿಷ್ಕ್ರಿಯವಾಗಿದ್ದು, ಇದನ್ನು ಶುದ್ಧೀಕರಿಸುವ ಪ್ರಕ್ರಿಯೆಗೆ ಹೈಕೋರ್ಟ್ ಮುಂದಾಗಬೇಕಾಗುತ್ತದೆ’ ಎಂದು ವಿಭಾಗೀಯ ನ್ಯಾಯಪೀಠ ಸರ್ಕಾರಕ್ಕೆ ಕಠಿಣ ಎಚ್ಚರಿಕೆ ನೀಡಿದೆ.
‘ಸಹಾಯಕ ಎಂಜಿನಿಯರ್‌ಗಳ ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಯೋಗ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕು’ ಎಂಬ ಮನವಿಯನ್ನು ನಿರಾಕರಿಸಿರುವ ಕೆಎಟಿ ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್ ಮತ್ತಿತರರು ಸಲ್ಲಿಸಿರುವ ಮೇಲ್ಮನವಿಗಳನ್ನು ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
‘ಕೆಪಿಎಸ್‌ಸಿ ಶುದ್ಧೀಕರಣ ಪ್ರಕ್ರಿಯೆಯನ್ನು ನಾವೇ ಆರಂಭಿಸುತ್ತೇವೆ. ಯಾರೆಲ್ಲಾ ಸಗಣಿ ತಿನ್ನುತ್ತಿದ್ದಾರೆಯೋ ಅವರನ್ನು ಸುಮ್ಮನೆ ಬಿಡೋದಿಲ್ಲ. ಈ ವಿಚಾರದಲ್ಲಿ 4-5 ತಲೆ ಉರುಳಿದರೆ ಸರಿ ಹೋಗುತ್ತದೆ. ಎಲ್ಲಾ ಕಡೆ ಕೆಟ್ಟವರೇ ಇರುತ್ತಾರೆ ಎಂದೇನಿಲ್ಲ. ಒಳ್ಳೆಯವರೂ ಇರುತ್ತಾರೆ. ಆದರೆ ಕೆಟ್ಟ ಜನರು ಒಳ್ಳೆಯವರನ್ನು ಬಿಡೋದಿಲ್ಲ. ಹಾಗಾಗಿ, ನಾವು ಆಯೋಗದ ನೇಮಕದಲ್ಲಿ ಪಾರದರ್ಶಕತೆ ತರಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡುತ್ತೇವೆ. ವ್ಯವಸ್ಥೆಯನ್ನು ಉಳಿಸಬೇಕಾಗಿದೆ. ಇಲ್ಲವಾದರೆ ಮುಂದಿನ ತಲೆಮಾರಿಗೆ ಏನು ಉತ್ತರ ಹೇಳುವುದು’ ಎಂದು ನ್ಯಾಯಪೀಠ ಖಾರವಾಗಿ ಪ್ರಶ್ನಿಸಿತು.
ದಾಖಲೆ ಸಲ್ಲಿಕೆ: ಕೆಪಿಎಸ್‌ಸಿ ಪರ ಹಾಜರಾಗಿದ್ದ ಪದಾಂಕಿತ ಹಿರಿಯ ವಕೀಲ ರೂಬೇನ್ ಜಾಕೋಬ್, ‘ನೇಮಕದಲ್ಲಿ ಅಕ್ರಮ ನಡೆಸಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಒಂಎಂಆರ್ ಶೀಟ್‌ಗಳು, ಎಫ್‌ಎಸ್‌ಎಲ್ ವರದಿ, ಪೆನ್ ಡ್ರೈವ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದನ್ನು ದಾಖಲಿಸಿಕೊಂಡ ನ್ಯಾಯಪೀಠ, ‘ಮುಚ್ಚಿದ ಲಕೋಟೆಯಲ್ಲಿರುವ ವಿವರಗಳನ್ನು ಮೊದಲಿಗೆ ಕೆಲವು ವಕೀಲರ ಸಮಕ್ಷಮದಲ್ಲಿ ನಾವೇ ಪರಿಶೀಲಿಸುತ್ತೇವೆ. ಅಗತ್ಯಬಿದ್ದರೆ ಎಲ್ಲಾ ವಿವರಗಳನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿ ಟಿವಿಗಳನ್ನು ಹಾಕಿಸಿ; ಆಯೋಗದಲ್ಲಿ ಏನೆಲ್ಲಾ ನಡೀತಿದೆ ಎಂಬುದನ್ನು ಬಹಿರಂಗಪಡಿಸಲಾಗುವುದು’ ಎಂದು ನುಡಿಯಿತು.
‘2023ರ ಸೆಪ್ಟೆಂಬರ್‌ನಲ್ಲೇ ಎಲ್ಲಾ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದಕ್ಕೆ ಸರ್ಕಾರವೂ ಒಪ್ಪಿಕೊಂಡಿತ್ತು. ಆದರೆ ಇನ್ನೂ ನೇಮಕ ಪ್ರಕ್ರಿಯೆ ನಡೆಸಿಲ್ಲ. ಈ ರೀತಿ ಹೈಕೋರ್ಟ್ ಆದೇಶ ಪಾಲನೆ ಮಾಡದೇ ಹೋದರೆ ಬೆಲೆ ಎಲ್ಲಿದೆ’ ಎಂದು ನ್ಯಾಯಪೀಠ ಅತೃಪ್ತಿ ಹೊರಹಾಕಿತು. ಇದೇ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರಿಗೆ, ‘ಆಯೋಗವನ್ನು ಸರಿಪಡಿಸಲು ನ್ಯಾಯಾಲಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿ’ ಎಂದು ಸೂಚಿಸಿತು.
‘ದೊಡ್ಡ ಕುಳಗಳ ಕೈವಾಡ ಇಲ್ಲದೆ ಇಂತಹ ಅಕ್ರಮಗಳೆಲ್ಲಾ ನಡೆಯುವುದಿಲ್ಲ’ ಎಂದು ಕಿಡಿಕಾರಿದ ನ್ಯಾಯಪೀಠ, ‘ಆಯೋಗದ ಯಾವ್ಯಾವ ಸದಸ್ಯರು ಮತ್ತು ಸಿಬ್ಬಂದಿ ವಿರುದ್ಧ ಎಷ್ಟು ಕ್ರಿಮಿನಲ್ ಕೇಸುಗಳು ವಿಚಾರಣೆಗೆ ಬಾಕಿ ಇವೆ. ಅವೆಲ್ಲಾ ಯಾವ ಹಂತದಲ್ಲಿವೆ ಎಂಬ ವಿವರಗಳನ್ನು ಮುಂದಿನ ವಿಚಾರಣೆ ವೇಳೆಗೆ ಒದಗಿಸಿ’ ಎಂದು ಅಡ್ವೊಕೇಟ್ ಜನರಲ್ ಅವರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.