ADVERTISEMENT

ಕೆಪಿಎಸ್‌ಸಿ ಫಲಿತಾಂಶ | ಕೋಚಿಂಗ್ ಇಲ್ಲದೇ ಎ.ಸಿ. ಹುದ್ದೆಗೆ ಆಯ್ಕೆ!

ಎರಡನೇ ಪ್ರಯತ್ನದಲ್ಲೇ ನಿರೀಕ್ಷೆ ಮೀರಿದ ಹುದ್ದೆ

ಕೆ.ನರಸಿಂಹ ಮೂರ್ತಿ
Published 24 ಡಿಸೆಂಬರ್ 2019, 5:06 IST
Last Updated 24 ಡಿಸೆಂಬರ್ 2019, 5:06 IST
ವಿಷ್ಣುವರ್ಧನ ರೆಡ್ಡಿ ಅವರಿಗೆ ತಾಯಿ ಸರಳಾ ಅವರಿಂದ ಮೆಚ್ಚುಗೆಯ ಮುತ್ತು. ತಂದೆ ತಿಮ್ಮಾರೆಡ್ಡಿ ಇದ್ದಾರೆ
ವಿಷ್ಣುವರ್ಧನ ರೆಡ್ಡಿ ಅವರಿಗೆ ತಾಯಿ ಸರಳಾ ಅವರಿಂದ ಮೆಚ್ಚುಗೆಯ ಮುತ್ತು. ತಂದೆ ತಿಮ್ಮಾರೆಡ್ಡಿ ಇದ್ದಾರೆ   

ಬಳ್ಳಾರಿ: ಇಲ್ಲಿನ ಬಸವೇಶ್ವರ ನಗರದ ಟಿ.ಎಸ್‌.ವಿಷ್ಣುವರ್ಧನ ರೆಡ್ಡಿ ಅವರಿಗೆ ಕೆಪಿಎಸ್‌ಸಿ ಪರೀಕ್ಷೆಯ ಎರಡನೇ ಪ್ರಯತ್ನದಲ್ಲಿ ಅವರ ನಿರೀಕ್ಷೆಮೀರಿದ ಹುದ್ದೆ ದೊರಕಿದೆ. ಅವರು ತಹಶೀಲ್ದಾರ್‌ ಹುದ್ದೆಗೆ ಆಯ್ಕೆಯಾಗಬಹುದೆಂದುಕೊಂಡಿದ್ದರು. ಆದರೆ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ!

ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡು 2011 ಮತ್ತು 2012ರಲ್ಲಿ ಅವರು ಯುಪಿಎಸ್‌ಸಿ ಪರೀಕ್ಷೆಗೂ ಹಾಜರಾಗಿದ್ದರು. ಮುಖ್ಯ ಪರೀಕ್ಷೆ ಪಾಸಾಗಿರಲಿಲ್ಲ. ಆದರೆ ಭರವಸೆ ಕಳೆದುಕೊಳ್ಳದೇ ಕೆಪಿಎಸ್‌ಸಿ ಪರೀಕ್ಷೆಗೆ ಹಾಜರಾದರು. ಅಲ್ಲಿಯೂ ಮೊದಲ ಪ್ರಯತ್ನದಲ್ಲಿ ಸಂದರ್ಶನದವರೆಗೆ ಬಂದರೂ ಆಯ್ಕೆಯಾಗಲಿಲ್ಲ.ಆದರೆ ಎರಡನೇ ಪ್ರಯತ್ನ ಅವರ ಕೈಹಿಡಿದಿದೆ.

‘ಮಾನವಶಾಸ್ತ್ರ ಹೆಚ್ಚು ಅಂಕ ಗಳಿಸಬಹುದಾದ ವಿಷಯ. ಐಎಎಸ್‌, ಕೆಎಎಸ್‌ ಹುದ್ದೆಗೆ ಆಯ್ಕೆಯಾದ ಬಹುತೇಕರು ಅದನ್ನೇ ಆಯ್ಕೆ ಮಾಡಿಕೊಂಡಿರುವುದನ್ನು ಗಮನಿಸಿ ಅದನ್ನೇ ತೆಗೆದುಕೊಂಡಿದ್ದೆ’ ಎಂದು ಅವರು ವಿವರಿಸುತ್ತಾರೆ. ಅವರು ಮೆಕ್ಯಾನಿಕಲ್‌ ಎಂಜಿನಿಯರ್‌ ಪದವೀಧರರು.

ADVERTISEMENT

‘ಕೋಚಿಂಗ್ ಸೆಂಟರ್‌ಗಳಿಗೆ ಹೋಗುವುದಕ್ಕಿಂತಲೂ ಸ್ವಂತ ಓದಿಕೊಳ್ಳುವುದೇ ಲೇಸು ಎಂದು ಬೆಂಗಳೂರಿನಲ್ಲೇ ಬಾಡಿಗೆ ರೂಮಿನಲ್ಲಿದ್ದುಕೊಂಡು ಓದುತ್ತಿದ್ದೆ. 2012ರವರೆಗೂ ಕೆಲಸ ಮಾಡಿದೆ. ನಂತರ ಎಲ್ಲ ಸಮಯವನ್ನೂ ಕೆಪಿಎಸ್‌ಸಿ ಪರೀಕ್ಷೆಗೇ ಮೀಸಲಿಟ್ಟಿದ್ದೆ. ಶಿಸ್ತು, ಸಮಯಪಾಲನೆ ಬಿಡಲಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘2015ರಲ್ಲೇ ಪರೀಕ್ಷೆಯ ಅಧಿಸೂಚನೆ ಪ್ರಕಟವಾದರೂ 2017ರಲ್ಲಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ನಡೆದಿತ್ತು. 2019ರ ಆರಂಭದಲ್ಲಿ ಮುಖ್ಯಪರೀಕ್ಷೆಯ ಫಲಿತಾಂಶ ಬಂದಿತ್ತು. ಸೆಪ್ಟೆಂಬರ್‌ನಲ್ಲಿ ಸಂದರ್ಶನ ನಡೆದಿತ್ತು’ ಎಂದರು.

ಕಿರಾಣಿ ಅಂಗಡಿ ನಡೆಸುತ್ತಿದ್ದ ತಂದೆ ತಿಮ್ಮಾರೆಡ್ಡಿ ವಿಶ್ರಾಂತಿ ಪಡೆಯುತ್ತಿದ್ದಾರೆ. ತಾಯಿ ಸರಳಾ.ಅಕ್ಕ– ಭಾವ ಡಾ.ಕುಮುದಿನಿ ಹಾಗೂ ಡಾ.ನಾರಾಯಣ ಶ್ರೀಹರಿ ಅವರ ಪ್ರೋತ್ಸಾಹವನ್ನೂ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.