ADVERTISEMENT

ಮತ್ತೆ ಎಡವಟ್ಟು: ಐಎಎಸ್‌ಗೆ ಕುತ್ತು?

ಅಂಕ ಪರಿಗಣನೆ ವೇಳೆ ಕೆಪಿಎಸ್‌ಸಿ ಲೋಪ- ಅಕ್ರಂ ಪಾಶಾ ದೂರು

ರಾಜೇಶ್ ರೈ ಚಟ್ಲ
Published 18 ಸೆಪ್ಟೆಂಬರ್ 2019, 20:24 IST
Last Updated 18 ಸೆಪ್ಟೆಂಬರ್ 2019, 20:24 IST
   

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಪಾರಾಗುವ ಲಕ್ಷಣಗಳು ಸದ್ಯಕ್ಕಂತೂ ಕಾಣಿಸುತ್ತಿಲ್ಲ!

ಈ ಸಾಲಿನ ಆಯ್ಕೆ ಪಟ್ಟಿಯನ್ನು ಹೈಕೋರ್ಟ್ ತೀರ್ಪಿನಂತೆ ಎರಡನೇ ಬಾರಿ ಪರಿಷ್ಕರಿಸುವ ಸಂದರ್ಭದಲ್ಲಿ ಕೆಪಿಎಸ್‌ಸಿಮಾಡಿದ ತಪ್ಪಿನಿಂದಾಗಿ ಹುದ್ದೆ ಬದಲಾಗುವ ಜೊತೆಗೆ, ಐಎಎಸ್ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎಂದು ಅಕ್ರಂ ಪಾಶಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ (ಸಿ.ಎಸ್‌) ಬಳಿ ಅಳಲು ತೋಡಿಕೊಂಡಿದ್ದಾರೆ.

ಪಟ್ಟಿ ಪರಿಷ್ಕರಣೆಯಿಂದಾಗಿ, ಈ ಸಾಲಿನಲ್ಲಿ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿ ಬಳಿಕ ಐಎಎಸ್‌ಗೆಬಡ್ತಿ ಪಡೆದ ಅಕ್ರಂ ಪಾಶಾ ಸೇರಿದಂತೆ 11 ಅಧಿಕಾರಿಗಳ ಹುದ್ದೆಗಳು ಸ್ಥಾನಪಲ್ಲಟಗೊಂಡಿವೆ. ಆದರೆ, ಅವರೆಲ್ಲರೂ ಸಿಎಟಿಯಿಂದ ತಡೆಯಾಜ್ಞೆ ತಂದು ಐಎಎಸ್ ಹುದ್ದೆಯಲ್ಲೇ ಮುಂದು ವರಿದಿದ್ದಾರೆ.

ADVERTISEMENT

‘ಪಟ್ಟಿ ಪರಿಷ್ಕರಣೆ ವೇಳೆಯಲ್ಲಿ ಕೆಪಿಎಸ್‌ಸಿ ಅಂಕಗಳನ್ನು ಪರಿಗಣಿಸುವಾಗ ಮಾಡಿದ ತಪ್ಪಿನಿಂದಾಗಿ‌ ನನ್ನ ಹುದ್ದೆಗೆ ಕುತ್ತು ಉಂಟಾಗಿದೆ’ ಎನ್ನುವುದು ಅಕ್ರಂ ಅವರ ಆರೋಪ.

2ಬಿ ಕೆಟಗರಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಅಕ್ರಂ ಪಾಶಾ ಆಯ್ಕೆಯಾಗಿದ್ದರು. ಕೆಪಿಎಸ್‌ಸಿಆರಂಭದಲ್ಲಿ ಪಟ್ಟಿ ಪ್ರಕಟಿಸಿದಾಗ ಅವರು 1,125 ಅಂಕ ಪಡೆದರೆ, ನಂತರದ ಅಭ್ಯರ್ಥಿ (2ಬಿ) 1,060 ಅಂಕ ಪಡೆದಿದ್ದರು.

ಹೈಕೋರ್ಟ್ ತೀರ್ಪಿನಂತೆ ಮೊದಲ ಬಾರಿ ಪಟ್ಟಿ ಪರಿಷ್ಕರಿಸಿದಾಗ ಅಕ್ರಂ ಪಾಶಾ 1,121 ಅಂಕ ಪಡೆದು ಟಾಪ್ ಸ್ಥಾನದಲ್ಲೇ ಇದ್ದರು. ನಂತರದ ಅಭ್ಯರ್ಥಿ 1,040 ಅಂಕ ಪಡೆದಿದ್ದರು‌. ಹೈಕೋರ್ಟ್ ತೀರ್ಪಿನಂತೆ 91 ಅಭ್ಯರ್ಥಿ ಗಳ ಮರು ಮೌಲ್ಯಮಾಪನ ಅಂಕ ಪರಿ ಗಣಿಸಿ ಆ. 22ರಂದು ಎರಡನೇ ಬಾರಿಗೆ ಕೆಪಿಎಸ್‌ಸಿಪಟ್ಟಿ ಪರಿಷ್ಕರಿಸಿದೆ. 91 ಅಭ್ಯರ್ಥಿಗಳಲ್ಲಿ ಅಕ್ರಂ ಇಲ್ಲದೇ ಇದ್ದುದ ರಿಂದ ಅವರ ಅಂಕದಲ್ಲಿ ವ್ಯತ್ಯಾಸವಾ ಗಿಲ್ಲ. ಆದರೆ, ನಂತರದ ಅಭ್ಯರ್ಥಿ 62 ಅಂಕ ಹೆಚ್ಚುವರಿಯಾಗಿ ಗಳಿಸಿದ್ದಾರೆ. ಈ ಅಭ್ಯರ್ಥಿ ಆರಂಭದಲ್ಲಿ ಗಳಿಸಿದ ಅಂಕಕ್ಕೆ (1,060) ಈ ಹೆಚ್ಚುವರಿ ಅಂಕ ಸೇರಿಸಿದ್ದರಿಂದ ಅವರ ಅಂಕ 1,122 (ಅಕ್ರಂ ಅವರಿಗಿಂತ ಒಂದು ಅಂಕ ಹೆಚ್ಚು) ಆಗಿದೆ.

‘ಕೆಪಿಎಸ್‌ಸಿ ಆರಂಭದ ಅಂಕ ಪರಿಗಣಿಸುವುದಾದರೆ, ಆಗ ನನಗೆ 1,125 ಅಂಕ ಇತ್ತು. 3 ಅಂಕಗಳಿಂದ ನಾನೇ ಮುಂದಿರುತ್ತೇನೆ. ಬಳಿಕದ ಇಬ್ಬರ ಅಂಕಗಳನ್ನು ಪರಿಗಣಿಸಿ, ಹೆಚ್ಚುವರಿ ಅಂಕವನ್ನು ನನ್ನ ನಂತರದ ಅಭ್ಯರ್ಥಿಗೆ ಸೇರಿಸಿದರೂ ನಾನು 10 ಅಂಕಗಳಿಂದ ಮುಂದಿರುತ್ತೇನೆ. ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿಯ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಕೋರ್ಟ್ ತೀರ್ಪಿನಂತೆ ಪಟ್ಟಿ ಅಂತಿಮವಾಗಿದೆ. ಕೋರ್ಟಿನಲ್ಲೇ ಪ್ರಶ್ನಿಸುವಂತೆ ಅವರು ಸಲಹೆ ನೀಡಿದ್ದಾರೆ’ ಎಂದು ಅಕ್ರಂ ಪಾಶಾ ತಿಳಿಸಿದರು.

‘ಕೆಪಿಎಸ್‌ಸಿಲೋಪ ಎಸಗಿದ ತಪ್ಪಿನಿಂದಾಗಿ ನಾನು ಆಯ್ಕೆಯಾಗಿದ್ದ ಉ‍‍‍ಪವಿಭಾಗಾಧಿಕಾರಿ ಹುದ್ದೆಯಿಂದ ಸ್ಥಾನಪಲ್ಲಟಗೊಳ್ಳುವಂತಾಗಿದೆ. ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೂ ಮನವಿ ಸಲ್ಲಿಸಿದ್ದೇನೆ’ ಎಂದರು.

ಕೆಎಟಿ ಆದೇಶ: ಪಟ್ಟಿ ಮತ್ತೆ ಪರಿಷ್ಕರಣೆ?

ಇದೇ ಸಾಲಿನಲ್ಲಿ ಆಯ್ಕೆಯಾಗಿ ಕರ್ತವ್ಯದಲ್ಲಿರುವ ಕೆ. ಮುರಳೀಧರ ಎಂಬ ಅಧಿಕಾರಿಯ ಮೂರನೇ ಮೌಲ್ಯಮಾಪನ ಅಂಕವನ್ನು ಪರಿಗಣಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಇದೇ 16ರಂದು ಕೆಪಿಎಸ್‌ಸಿಗೆಆದೇಶಿಸಿದೆ. ಹೀಗಾಗಿ, ಮೂರನೇ ಬಾರಿಗೆ ನೇಮಕಾತಿ ಪಟ್ಟಿಯನ್ನು ಕೆಪಿಎಸ್‌ಸಿಪರಿಷ್ಕರಿಸಬೇಕಾದ ಸ್ಥಿತಿಯೂ ಎದುರಾಗಿದೆ.

ಕೆಎಟಿ ಆದೇಶದಂತೆ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಕೆಪಿಎಸ್‌ಸಿಕಾರ್ಯದರ್ಶಿಗೆ ಮುರಳೀಧರ ಅವರು ಮನವಿ ಸಲ್ಲಿಸಿದ್ದಾರೆ.

‘ನನ್ನ ಅಂಕಗಳನ್ನು ಪರಿಗಣಿಸಿದರೆ, ಈಗಿರುವ ಹುದ್ದೆಯಿಂದ ಸ್ಥಾನಪಲ್ಲಟಗೊಂಡು ಉನ್ನತ ಶ್ರೇಣಿಯ ಹುದ್ದೆ ಗಿಟ್ಟಿಸಿಕೊಳ್ಳಲು ಅರ್ಹತೆ ಪಡೆಯುತ್ತೇನೆ. ಕೆಎಟಿಯಲ್ಲಿ ಮೂರು ವರ್ಷಗಳ ಹೋರಾಟದ ಬಳಿಕ ನ್ಯಾಯ ಸಿಕ್ಕಿದೆ’ ಎಂದು ಮುರಳೀಧರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.