ADVERTISEMENT

ಕೆಪಿಎಸ್‌ಸಿ: ಸಿಎಸ್‌ ನೇತೃತ್ವದಲ್ಲಿ ಜ. 27ರಂದು ಸಭೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 15:16 IST
Last Updated 18 ಜನವರಿ 2025, 15:16 IST
ಕೆಪಿಎಸ್‌ಸಿ
ಕೆಪಿಎಸ್‌ಸಿ    

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ನಡೆದ ಪೂರ್ವಭಾವಿ ಮರು ಪರೀಕ್ಷೆಯಲ್ಲೂ ಭಾಷಾಂತರ ಗೊಂದಲ ಸೇರಿದಂತೆ ಕೆಪಿಎಸ್‌ಸಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅಧ್ಯಕ್ಷತೆಯಲ್ಲಿ ಶನಿವಾರ (ಜ. 18) ಆಯೋಜಿಸಿದ್ದ ಸಭೆಯನ್ನು ಜ.27ಕ್ಕೆ ಮುಂದೂಡಲಾಗಿದೆ.

ಸಭೆಯನ್ನು 27ರ ಮಧ್ಯಾಹ್ನ 3.30ಕ್ಕೆ ಮುಂದೂಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ವಿಶೇಷಾಧಿಕಾರಿ ತಿಳಿಸಿದ್ದಾರೆ. ಅದರೆ, ಸಭೆ ಮುಂದೂಡಲು ಕಾರಣ ವಿವರಿಸಿಲ್ಲ. ಕೆಪಿಎಸ್‌ಸಿ ಕಾರ್ಯದರ್ಶಿ ರಜೆಯಲ್ಲಿ ತೆರಳಿರುವುದರಿಂದ ಸಭೆ ಮುಂದೂಡಲಾಗಿದೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಡಿಪಿಎಆರ್ ಕಾರ್ಯದರ್ಶಿ ಮತ್ತು ಇ– ಆಡಳಿತ ವಿಭಾಗದ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮತ್ತು ನಿರ್ದೇಶಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಅಗತ್ಯ ಮಾಹಿತಿ ಜೊತೆ ಸಭೆಗೆ ಹಾಜರಾಗಬೇಕು. ಸಭೆಗೂ ಮೊದಲೇ ಟಿಪ್ಪಣಿಯೊಂದನ್ನು ಮುಖ್ಯ ಕಾರ್ಯದರ್ಶಿಗೆ ನೀಡಬೇಕು ಎಂದು ಸಭಾ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

ADVERTISEMENT

ಈ ಹುದ್ದೆಗಳಿಗೆ ಆಗಸ್ಟ್‌ 27ರಂದು ನಡೆದಿದ್ದ ಪೂರ್ವಭಾವಿ ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಭಾಷಾಂತರ ತಪ್ಪುಗಳು ಕಂಡುಬಂದ ಕಾರಣ ಡಿ. 29ರಂದು ಮರು ಪರೀಕ್ಷೆ ನಡೆಸಲಾಗಿತ್ತು. ಮರು ಪರೀಕ್ಷೆಯಲ್ಲೂ ಸಾಕಷ್ಟು ಲೋಪಗಳಾಗಿದ್ದವು.

ಕೆಲ ಕೇಂದ್ರಗಳಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಮತ್ತು ಒಎಂಆರ್‌ ಶೀಟ್‌ನಲ್ಲಿದ್ದ ಸಂಖ್ಯೆ ತಾಳೆಯಾಗದೆ ಗೊಂದಲ ಮೂಡಿತ್ತು. ಹೀಗಾಗಿ ಮತ್ತೆ ಪೂರ್ವಭಾವಿ ಪರೀಕ್ಷೆ ನಡೆಸಬೇಕು ಅಥವಾ ಮುಖ್ಯ ಪರೀಕ್ಷೆಗೆ 1:50 ಅನುಪಾತದಲ್ಲಿ ಆಯ್ಕೆ ಮಾಡಬೇಕು ಎಂದು ಅಭ್ಯರ್ಥಿಗಳು ಪಟ್ಟು ಹಿಡಿದಿದ್ದಾರೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.