ADVERTISEMENT

ಪ್ರಜಾವಾಣಿ ವಿಶೇಷ | ಪಿಯುಸಿಗೆ ಡಿಪ್ಲೊಮಾ ಸಮವೆಂದು ಪರಿಗಣಿಸದ ಕೆಪಿಟಿಸಿಎಲ್

ಕಿರಿಯ ಸಹಾಯಕ ಹುದ್ದೆಗಳಿಗೆ ಡಿಪ್ಲೊಮಾ ಮುಗಿಸಿದವರು ಅರ್ಜಿ ಸಲ್ಲಿಸಲು ಸಿಗದ ಅವಕಾಶ

ವಿಜಯಕುಮಾರ್ ಎಸ್.ಕೆ.
Published 16 ಫೆಬ್ರುವರಿ 2022, 19:07 IST
Last Updated 16 ಫೆಬ್ರುವರಿ 2022, 19:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಮೂರು ವರ್ಷಗಳ ಡಿಪ್ಲೊಮಾ ಶಿಕ್ಷಣವು ಪಿಯುಸಿಗೆ ತತ್ಸಮಾನ’ ಎಂಬ ಸರ್ಕಾರದ ಆದೇಶವನ್ನು ಪರಿಗಣಿಸದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್‌) ನೇಮಕಾತಿ ಪ್ರಕ್ರಿಯೆ ನಡೆಸುತ್ತಿದ್ದು, ಇದರಿಂದ ಡಿಪ್ಲೊಮಾ ಕೋರ್ಸ್ ಮುಗಿಸಿರುವ ಲಕ್ಷಾಂತರ ಉದ್ಯೋಗಾಂಕ್ಷಿಗಳು ‘ಕಿರಿಯ ಸಹಾಯಕ’ ಹುದ್ದೆಗೆ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

ಸಹಾಯಕ ಎಂಜಿನಿಯರ್‌, ಕಿರಿಯ ಎಂಜಿನಿಯರ್‌, ಕಿರಿಯ ಸಹಾಯಕ ಸೇರಿ 1,492 ಹುದ್ದೆಗಳ ಭರ್ತಿಗೆ ಫೆಬ್ರುವರಿ 1ರಂದು ಕೆಪಿಟಿಸಿಎಲ್ ಅಧಿಸೂಚನೆ ಹೊರಡಿಸಿದೆ. ಆ ಪೈಕಿ 360 ಕಿರಿಯ ಸಹಾಯಕ ಹುದ್ದೆಗಳಿವೆ. ಆನ್‌ಲೈನ್‌ನಲ್ಲಿ ಮೂಲಕವಷ್ಟೇ ಅರ್ಜಿ ಸಲ್ಲಿಸಲು ಅವಕಾಶ ಇದ್ದು, ಅರ್ಜಿ ಸಲ್ಲಿಕೆಗೆ ಮಾರ್ಚ್ 7ರಂದು ಕಡೆಯ ದಿನ. ಅನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ ಕಾಲಂನಲ್ಲಿ ದ್ವಿತೀಯ ಪಿಯುಸಿ, ಸಿಬಿಎಸ್‌ಇ ಪಠ್ಯಕ್ರಮದ 12ನೇ ತರಗತಿ, ಐಎಸ್‌ಸಿ ಪಠ್ಯಕ್ರಮದ 12ನೇ ತರಗತಿ ಎಂದಷ್ಟೇ ನಮೂದಿಸಲಾಗಿದೆ.

ಡಿಪ್ಲೊಮಾ ಕೋರ್ಸ್ ಮುಗಿಸಿದವರು ಅರ್ಜಿ ಸಲ್ಲಿಸಲು ಯತ್ನಿಸಿ ಅವಕಾಶ ಇಲ್ಲದಿರುವುದನ್ನು ಕಂಡು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ 85 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, 44 ಅನುದಾನಿತ ಮತ್ತು 196 ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳಿವೆ. ಇವುಗಳಿಂದ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಪ್ಲೊಮಾ ಮುಗಿಸಿ ಹೊರಗೆ ಬರುತ್ತಿದ್ದಾರೆ. ಡಿಪ್ಲೊಮಾ ಮುಗಿಸಿದವರಿಗೆ ಉದ್ಯೋಗಾವಕಾಶ ಕಡಿಮೆ ಎಂಬ ಮನೋಭಾವ ಇದ್ದು, ತೊಡೆದು ಹಾಕಲು ಈ ಕೋರ್ಸ್‌ ಪಿಯುಸಿಗೆ ತತ್ಸಮಾನ ಎಂಬ ಆದೇಶವನ್ನು 2021ರ ಸೆ.30ರಂದು ರಾಜ್ಯ ಸರ್ಕಾರ ಹೊರಡಿಸಿತು.

ADVERTISEMENT

‘ನೇರ ನೇಮಕಾತಿ ಅಥವಾ ಅನುಕಂಪ ಆಧಾರಿತ ನೇಮಕಾತಿ ಮತ್ತು ಉನ್ನತ ಶಿಕ್ಷಣ ಪಡೆಯಲು ಡಿಪ್ಲೊಮಾವನ್ನು ಪಿಯುಸಿಗೆ ತತ್ಸಮಾನವೆಂದು ಪರಿಗಣಿಸಬೇಕು. ಅವರು ಕನ್ನಡ ಭಾಷಾ ಪರೀಕ್ಷೆ ತೇರ್ಗಡೆ ಹೊಂದಬೇಕಾಗುತ್ತದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಅದನ್ನು ಆಧರಿಸಿ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿದ್ದವು. ಕೆಪಿಎಸ್‌ಸಿ ಕೂಡ ಕಿರಿಯ ಸಹಾಯಕರ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಡಿಪ್ಲೊಮಾ ವಿದ್ಯಾರ್ಹತೆಯನ್ನು ಪಿಯುಸಿಗೆ ಸಮ ಎಂದು ಪರಿಗಣಿಸಿದೆ. ಈಗ ಕೆಪಿಟಿಸಿಎಲ್‌ ಈ ಆದೇಶವನ್ನು ಗಣನೆಗೆ ತೆಗೆದುಕೊಳ್ಳದೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ಆಡಳಿತ ಮಂಡಳಿಯ ತೀರ್ಮಾನ ಎಂಬ ಉತ್ತರವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಸರ್ಕಾರದ ಆದೇಶಕ್ಕಿಂತ ಕೆಪಿಟಿಸಿಎಲ್ ಆಡಳಿತ ಮಂಡಳಿ ತೀರ್ಮಾನ ದೊಡ್ಡದೇ’ ಎಂಬುದು ಉದ್ಯೋಗಾಕಾಂಕ್ಷಿಗಳ ಪ್ರಶ್ನೆ.

‘ಕಿರಿಯ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸಲು ನಮಗೂ ಅವಕಾಶ ಕಲ್ಪಿಸಬೇಕು. ಅವಕಾಶ ಸಿಗದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲಾಗುವುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉದ್ಯೋಗಾಕಾಂಕ್ಷಿಯೊಬ್ಬರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಆಡಳಿತ ಮಂಡಳಿ ತೀರ್ಮಾನ’

‘ಡಿಪ್ಲೊಮಾ ಮುಗಿಸಿದವರು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೀಗಾಗಿಯೇ ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶ ಕಲ್ಪಿಸಿಲ್ಲ’ ಎಂದು ಕೆಪಿಟಿಸಿಎಲ್ ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

‘ಸರ್ಕಾರದ ಆದೇಶ ಹೊರಡಿಸಿರುವುದು ಗಮನದಲ್ಲಿದೆ. ಆಡಳಿತ ಮಂಡಳಿ ಮುಂದೆ ವಿಷಯ ಮಂಡಿಸಲಾಗಿತ್ತು. ಡಿಪ್ಲೊಮಾ ಮುಗಿಸಿದವರಿಗೆ ಕಿರಿಯ ಸಹಾಯಕರ ಹುದ್ದೆಗಳಿಗೆ ಅವಕಾಶ ನೀಡಿದರೆ ಮುಂದಿನ ದಿನಗಳಲ್ಲಿ ಎಂಜಿನಿಯರ್ ಹುದ್ದೆಗೆ ಬಡ್ತಿ ಕೇಳುವ ಸಾಧ್ಯತೆ ಇದೆ. ಆದ್ದರಿಂದ ಅವರನ್ನು ಪರಿಗಣಿಸುವುದು ಬೇಡ ಎಂಬ ನಿರ್ಧಾರವನ್ನು ಆಡಳಿತ ಮಂಡಳಿ ಕೈಗೊಂಡಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.