ADVERTISEMENT

ವಿವಿಧ ‘ಭಾಗ್ಯ’ಗಳಿಗೆ ಕತ್ತರಿ

ಕಿಸಾನ್‌ ಸಮ್ಮಾನ್‌ ಯೋಜನೆಗೆ ಅನುದಾನ ಹೊಂದಾಣಿಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 20:45 IST
Last Updated 16 ಆಗಸ್ಟ್ 2019, 20:45 IST
   

ಬೆಂಗಳೂರು: ‘ಅನ್ನಭಾಗ್ಯ’ ಸೇರಿದಂತೆ ಹಿಂದಿನ ಸರ್ಕಾರಗಳ ವಿವಿಧ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕುವ ಬಿಜೆ‍ಪಿ ಸರ್ಕಾರದ ಚಿಂತನೆಗೆ ಆಕ್ರೋಶ ವ್ಯಕ್ತವಾಗಿದೆ.

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಕೇಂದ್ರದ‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌’ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ವಾರ್ಷಿಕ ₹ 4,000 ನೀಡುವ ಯೋಜನೆ ಪ್ರಕಟಿಸಿದರು. ಈ ಯೋಜನೆ ಅನುಷ್ಠಾನಕ್ಕೆ ಸುಮಾರು ₹ 2,200 ಕೋಟಿ ಅಗತ್ಯವಾಗಿದ್ದು, ಬಜೆಟ್‌ನಲ್ಲಿ ಅವಕಾಶ ಕಲ್ಪಿಸಿಲ್ಲ. ಹೀಗಾಗಿ, ಇರುವ ಸಂಪನ್ಮೂಲದಲ್ಲೇ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಅಧಿಕಾರಿಗಳು ಪ‍್ರಸ್ತಾವ ಸಿದ್ಧಪಡಿಸಿದ್ದು, ಯಾವ ಬಾಬ್ತಿನಲ್ಲಿ ಅನುದಾನ ಕಡಿತ ಮಾಡಬಹುದು ಎಂಬ ಸಲಹೆ ನೀಡಿದ್ದಾರೆ.

ಅನ್ನಭಾಗ್ಯದಿಂದ ₹500 ಕೋಟಿ: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ನೀಡುತ್ತಿರುವ 2 ಕೆ.ಜಿ. ಅಕ್ಕಿ ಮತ್ತು ಒಂದು ಕೆ.ಜಿ ತೊಗರಿ ಬೇಳೆ ಸ್ಥಗಿತಗೊಳಿಸಿದರೆ, ₹500 ಕೋಟಿ ಉಳಿತಾಯ ಮಾಡಬಹುದು. ಕೇಂದ್ರ ನೀಡುವ 5 ಕೆ.ಜಿ ಅಕ್ಕಿ ಜತೆಗೆ ರಾಜ್ಯ ಸರ್ಕಾರ ನೀಡುತ್ತಿರು ಹೆಚ್ಚುವರಿ 2 ಕೆ.ಜಿ ಅಕ್ಕಿಗೆ ವಾರ್ಷಿಕ ₹2,850 ಕೋಟಿ ಅನುದಾನ ಬೇಕಾಗಿದೆ.

ADVERTISEMENT

ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಪ್ರಸ್ತಾಪಿಸಿರುವ ಸುತ್ತು ನಿಧಿಗೆ ಬಜೆಟ್‌ನಲ್ಲಿ ₹500 ಕೋಟಿ ಒದಗಿಸಿದ್ದು, ಯೋಜನೆ ಅನುಷ್ಠಾನದ ಹಂತದಲ್ಲಿರುವುದರಿಂದ ಇದನ್ನು ಸ್ಥಗಿತಗೊಳಿಸಿ, ಉಳಿತಾಯ ಮಾಡಬಹುದು.

ವಿಜಯಪುರ ಜಿಲ್ಲೆಯಲ್ಲಿ ದಾಳಿಂಬೆ ಮತ್ತು ದ್ರಾಕ್ಷಿ ಬೆಳೆಗಾರರಿಗೆ ಘೋಷಿಸಿರುವ ₹150 ಕೋಟಿ ಪ್ಯಾಕೇಜ್‌ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಿಗೆ ಘೋಷಿಸಿರುವ ₹150 ಕೋಟಿಯನ್ನೂ ಉಳಿತಾಯ ಮಾಡಬಹುದು.

ಹಿಂದುಳಿದ ವರ್ಗದ ವಿವಿಧ ಸಮುದಾಯಗಳಿಗೆ ₹134 ಕೋಟಿ ಘೋಷಿಸಲಾಗಿದ್ದು, ಅದನ್ನು ಬಳಸಬಹುದಾಗಿದೆ.

ಈ ಯೋಜನೆಗಳನ್ನು ಮರು ಪರಿಶೀಲಿಸಲು ಮುಖ್ಯಮಂತ್ರಿ ಒಪ್ಪಿದರೆ, ಕಿಸಾನ್‌ ಸಮ್ಮಾನ್‌ಗೆ ಅನುದಾನ ಒದಗಿಸಲು ಸಾಧ್ಯ ಎಂಬುದು ಅಧಿಕಾರಿಗಳ ಸಲಹೆ.

ಜನ ವಿರೋಧಿ ಕ್ರಮ– ಕೆಪಿಸಿಸಿ

ಕಿಸಾನ್‌ ಸಮ್ಮಾನ್‌ ಯೋಜನೆಗೆ ಹಣ ಹೊಂದಿಸಲು ‘ಅನ್ನಭಾಗ್ಯ’ ಸೇರಿದಂತೆ ಹಲವು ಜನ ಕಲ್ಯಾಣ ಯೋಜನೆಗಳ ಅನುದಾನ ಕಡಿತ ಮಾಡಲು ಮುಂದಾಗಿರುವುದು ಜನ ವಿರೋಧಿ ಕ್ರಮ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟೀಕಿಸಿದ್ದಾರೆ.

‘ನಮ್ಮ ಸರ್ಕಾರ ಇದ್ದಾಗ ಆರಂಭಿಸಿದ ಜನಪರ ಕಲ್ಯಾಣ ಯೋಜನೆಗಳ ಅನುದಾನ ಕಡಿತ ಮಾಡುವುದು ಸರಿಯಲ್ಲ. ಬಡವರ ಯೋಜನೆಗಳಿಗೆ ಕೈ ಹಾಕಿರುವುದು ತಪ್ಪು. ಶೇ 50 ರಷ್ಟು ತಾಲ್ಲೂಕುಗಳು ಬರಪೀಡಿತವಾಗಿದ್ದು, ಬಡ ಜನರಿಗೆ ಅನ್ನಭಾಗ್ಯವೇ ಆಧಾರವಾಗಿದೆ. ಅದನ್ನು ರದ್ದು ಮಾಡಿದರೆ ಸುಮ್ಮನಿರುವುದಿಲ್ಲ. ಕೇಂದ್ರದಿಂದ ಹೆಚ್ಚಿನ ಅನುದಾನ ತರಿಸಿಕೊಳ್ಳಲಿ’ ಎಂದರು.

*ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಜನಪರ ಯೋಜನೆಗಳ ಅನುದಾನಕ್ಕೆ ಕತ್ತರಿ ಹಾಕಿದರೆ, ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತೇವೆ

- ಜಿ.ಪರಮೇಶ್ವರ, ಶಾಸಕ

*ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ ಪ್ರಕಾರವೇ ನಡೆದುಕೊಳ್ಳಬೇಕು. ಯೋಜನೆ ರದ್ದು ಮಾಡಿದರೆ ಸುಮ್ಮನಿರುವುದಿಲ್ಲ

- ಡಿ.ಕೆ.ಶಿವಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.