ಬೆಂಗಳೂರು: ಬಗರ್‌ಹುಕುಂ ಅಡಿ ಸಲ್ಲಿಸಲಾಗಿರುವ ನಮೂನೆ 53 ಹಾಗೂ ನಮೂನೆ 57ರ ಅರ್ಜಿಗಳು ವಿಲೇವಾರಿಯಾಗದೇ ರೈತರ ಬೆಳೆ ನಾಶ ಮಾಡುವುದು ಅಥವಾ ಒಕ್ಕಲೆಬ್ಬಿಸುವ ಕ್ರಮಕ್ಕೆ ಮುಂದಾಗಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನಸಭೆಯಲ್ಲಿ ಬಿಜೆಪಿಯ ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಂತಹ ಘಟನೆಗಳು ನಡೆದರೆ ಕೂಡಲೇ ನನ್ನ ಗಮನಕ್ಕೆ ತರಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಈ ಅರ್ಜಿಗಳು ಇತ್ಯರ್ಥ ಆಗುವುದಕ್ಕೂ ಮೊದಲು ಅರ್ಜಿದಾರರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಅಲ್ಲದೇ, ಅರ್ಜಿ ಹಾಕಿರುವ ಕಡೆ ರೈತರ ಬೆಳೆ ಕಟಾವು ಮಾಡಲು ಅಡ್ಡಿಪಡಿಸಬಾರದು. ಈ ಸಂಬಂಧ ಸ್ಪಷ್ಟವಾದ ಕಾನೂನು ರೂಪಿಸಲಾಗಿದೆ. ಬಗರ್‌ಹುಕುಂಗೆ ಸಂಬಂಧಿಸಿದಂತೆ ಇಷ್ಟು ಸ್ಪಷ್ಟವಾಗಿ ಹಿಂದೆ ಯಾವತ್ತೂ ಸುತ್ತೋಲೆ ಹೊರಡಿಸಿರಲಿಲ್ಲ’ ಎಂದು ಅವರು ಹೇಳಿದರು.
ಬಗರ್‌ಹುಕುಂ ಯೋಜನೆ ಅಡಿ ಭೂಮಂಜೂರು ಮಾಡಲು ರಾಜ್ಯದಲ್ಲಿ ಈವರೆಗೆ 185 ಸಮಿತಿಗಳನ್ನು ರಚಿಸಲಾಗಿದೆ. ಇದೊಂದು ಹೊಸ ದಾಖಲೆ. ಅರ್ಜಿ ವಿಲೇವಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
‘ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ, ಅತಿ ಹೆಚ್ಚು ಬಗರ್‌ಹುಕುಂ ಸಮಿತಿಗಳನ್ನು ರಚಿಸಿದ್ದು, ನಮ್ಮ ಅವಧಿಯಲ್ಲೇ. ಅರ್ಜಿ ವಿಲೇ ಕೆಲಸಗಳನ್ನು ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ಧೇನೆ. ಈ ಸಂಬಂಧ ಅಧಿಕಾರಿಗಳಿಗೆ ಗಡುವು ನೀಡಿದ್ದು ನಿಜ. ಸರ್ಕಾರವೇ ಅದರ ಬೆನ್ನಟ್ಟಿರುವುದೂ ನಿಜ’ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.