ADVERTISEMENT

ಹಾವೇರಿಯಲ್ಲಿ ನಡೆಯುವುದು ಸಾರ್ಥಕ ಕೆಲಸದ ಸಮರ್ಪಣಾ ಕಾರ್ಯಕ್ರಮ: ಕೃಷ್ಣಬೈರೇಗೌಡ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 11:10 IST
Last Updated 13 ಫೆಬ್ರುವರಿ 2026, 11:10 IST
<div class="paragraphs"><p>ಸಚಿವ ಕೃಷ್ಣಬೈರೇಗೌಡ</p></div>

ಸಚಿವ ಕೃಷ್ಣಬೈರೇಗೌಡ

   

ಗದಗ: ‘ರಾಜ್ಯ ಸರ್ಕಾರ ಇಂದಿಗೆ 1 ಸಾವಿರ ದಿನಗಳನ್ನು ಪೂರೈಸಿದೆ. ಇದೊಂದು ಮೈಲುಗಲ್ಲು. ಅದರ ಜತೆಗೆ, ಸಿದ್ದರಾಮಯ್ಯ ಅವರು ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಹಾಗಂತ, ಹಾವೇರಿಯಲ್ಲಿ ಶನಿವಾರ ನಡೆಯುವುದು ಸಂಭ್ರಮಾಚರಣೆಯ ಕಾರ್ಯಕ್ರಮವಲ್ಲ. ಸಾವಿರ ದಿನಗಳ ಸಾರ್ಥಕ ಕೆಲಸವನ್ನು ಸಮರ್ಪಣೆ ಮಾಡುವ ಕಾರ್ಯಕ್ರಮವಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

‘ನಾವು ಮಾಡಿದ ಕೆಲಸಗಳ ವರದಿಯನ್ನು ಜನರಿಗೆ ವರದಿ ಒಪ್ಪಿಸುವುದು ಕೂಡ ಪ್ರಜಾಪ್ರಭುತ್ವದ ಭಾಗ. ಜನರ ಅನಿಶ್ಚಿತತೆ ಕಳೆದು, ಅವರ ನೆಮ್ಮದಿಯ ಬದುಕಿಗೆ ಭೂ ಗ್ಯಾರಂಟಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ. ಇದೊಂದು ಮೌನಕ್ರಾಂತಿ. ಅದನ್ನು ಸಂಭ್ರಮಿಸುವ ದಿನ ಇದಾಗಿದೆ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ 6,500 ವಸತಿ ಪ್ರದೇಶಗಳ ಜನರು ಈವರೆಗೆ ದಾಖಲೆ, ಹಕ್ಕುಪತ್ರಗಳಿಲ್ಲದೇ ಆತಂಕದಲ್ಲಿ ಬದುಕುತ್ತಿದ್ದರು. ಇಂತಹ ಜನರಿಗೆ ಶಾಶ್ವತ ಪರಿಹಾರ ಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ 2016ರಲ್ಲಿ ಕಾನೂನು ತಿದ್ದುಪಡಿ ತಂದು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಅಭಿಯಾನ ಆರಂಭಿಸಿತು’ ಎಂದು ತಿಳಿಸಿದರು.

‘2017ರಿಂದ 2023ರ ನಡುವೆ ಈ ರೀತಿಯ 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಕೊಟ್ಟು, 1,557 ಕಂದಾಯ ಗ್ರಾಮಗಳನ್ನು ಘೋಷಿಸಲಾಗಿತ್ತು. ಆರು ವರ್ಷಗಳಲ್ಲಿ 1 ಲಕ್ಷ ಕುಟುಂಬಕ್ಕೆ ಹಕ್ಕುಪತ್ರ ನೀಡಲಾಗಿತ್ತು. ಅದರಲ್ಲಿ ಇನ್ನೂ 3.50 ಲಕ್ಷ ಕುಟುಂಬಗಳಿಗೆ ಈ ಸೌಲಭ್ಯ ಒದಗಿಸುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಲಿಲ್ಲ’ ಎಂದು ದೂರಿದರು.

‘2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು ಆದ್ಯತೆಯಾಗಿ ತೆಗೆದುಕೊಂಡು ಎರಡೂವರೆ ವರ್ಷಗಳಲ್ಲಿ 2.20 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಒದಗಿಸಿದೆ. ಹಿಂದೆ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 1.10 ಲಕ್ಷ ಹಕ್ಕುಪತ್ರಗಳನ್ನು ನೀಡಲಾಗಿತ್ತು. ಫೆ.14ರಂದು ನಡೆಯುವ ಕಾರ್ಯಕ್ರಮದಲ್ಲಿ 1.06 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸುವ ಮೂಲಕ ಅವರ ದಶಕಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ, ಬದುಕಿಗೆ ಭೂ ಗ್ಯಾರಂಟಿ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ’ ಎಂದರು.

6,500 ಕಂದಾಯ ಗ್ರಾಮಗಳನ್ನು ಘೋಷಣೆ ಮಾಡುವ ಗುರಿಯೊಂದಿಗೆ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಇನ್ನೂ 1.39 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ಕೊಡುವ ಕೆಲಸ ಆಗಬೇಕಿದೆ. ಆದರೆ, ಕೇಂದ್ರ ಸರ್ಕಾರ ಜನಗಣತಿ ಆರಂಭಿಸಿದ್ದು ಅದರ ನಡುವೆ ಹೊಸ ಕಂದಾಯ ಗ್ರಾಮಗಳ ಘೋಷಣೆ ಮಾಡದಂತೆ ಸೂಚನೆ ನೀಡಿದೆ. ಅವರ ಸೂಚನೆ ಪಾಲಿಸುತ್ತಿದ್ದೇವೆ. ಜನಗಣತಿ ಮುಗಿದ ನಂತರ ಮತ್ತೇ ಈ ಕೆಲಸ ಆರಂಭಿಸಲಾಗುವುದು ಎಂದರು.

ಸಿಎಂ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ನನಗೆ ಆ ವಿಚಾರದ ಬಗ್ಗೆ ಮಾತನಾಡಲು ಅಪೇಕ್ಷೆ ಇಲ್ಲ. ಆದರೆ, ಕಾಲಕಾಲಕ್ಕೆ ಏನೇನು ಆಗಬೇಕೋ ಅದು ಆಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.