ಕೃಷ್ಣ ಬೈರೇಗೌಡ
ಬೆಂಗಳೂರು: ‘ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳ ಪೈಕಿ ಕನಿಷ್ಠ 5 ಸಾವಿರ ಅರ್ಜಿಗಳನ್ನಾದರೂ ಬಗರ್ ಹುಕುಂ ಸಮಿತಿ ಎದುರು ಮಂಡಿಸಿ ಡಿ. 15ರ ಒಳಗೆ ಸಾಗುವಳಿ ಚೀಟಿ ನೀಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಎಲ್ಲ ಜಿಲ್ಲಾಧಿಕಾರಿಗಳ ಜೊತೆ ಶುಕ್ರವಾರ ವಿಡಿಯೊ ಸಂವಾದ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜನವರಿ ವೇಳೆಗೆ ಈ ಗುರಿ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ ಆಗಲಿದೆ’ ಎಂದರು.
‘ಬಗರ್ ಹುಕುಂ ಅಡಿಯಲ್ಲಿ ಜಮೀನು ಮಂಜೂರಾತಿಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ 1.26 ಲಕ್ಷ ಅರ್ಜಿಗಳನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಎದುರು ಇಡಲಾಗಿದೆ. ಆದರೆ, ಆ ಸಂಖ್ಯೆ ಸಮಾಧಾನಕರವಾಗಿಲ್ಲ. ಹೀಗಾಗಿ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಗುರಿ ನಿಗದಿಪಡಿಸಲಾಗಿದೆ’ ಎಂದರು.
‘ಮೊದಲು ಗ್ರಾಮ ಆಡಳಿತಾಧಿಕಾರಿ ಅರ್ಜಿದಾರರ ಸ್ಥಳ ಪರಿಶೀಲಿಸಬೇಕು. ನಂತರ ಕಂದಾಯ ನಿರೀಕ್ಷಕರು ಹಾಗೂ ತಹಶೀಲ್ದಾರ್ ವರದಿ ಸಲ್ಲಿಸಬೇಕು. ಈ ಪ್ರಕ್ರಿಯೆಗಳ ನಂತರವೇ ಅರ್ಹ ಅರ್ಜಿಗಳನ್ನು ಬಗರ್ ಹುಕುಂ ಸಮಿತಿ ಎದುರು ಮಂಡಿಸಲು ಸಾಧ್ಯ. ಈ ಕೆಲಸಗಳಿಗೆ ಹೆಚ್ಚಿನ ಸಮಯ ಬೇಕಿದೆ’ ಎಂದರು.
ಡಿಜಿಟಲ್ ಸಾಗುವಳಿ ಚೀಟಿ: ‘ಬಗರ್ ಹುಕುಂ’ ಯೋಜನೆಯ ಅಡಿ ಅರ್ಹ ಫಲಾನುಭವಿಗಳಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು’ ಎಂದೂ ಅವರು ತಿಳಿಸಿದರು.
‘ಈ ಯೋಜನೆಯ ಅಡಿಯಲ್ಲಿ ಮಂಜೂರಾಗುವ ಜಮೀನಿಗೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ತಕರಾರು ಬರಬಾರದು, ಕಡತ ಕಳೆದು ಹೋಯಿತು ಎಂದು ರೈತರು ಮತ್ತೆ ಸರ್ಕಾರಿ ಕಚೇರಿಗೆ ಅಲೆಯಬಾರದು. ಹೀಗಾಗಿ ಅರ್ಹ ಅರ್ಜಿಗಳಿಗೆ ಮಂಜೂರಾದ ಜಮೀನಿಗೆ ಪೋಡಿ ಮಾಡಿಸಿ, ಪಹಣಿಯಲ್ಲಿ ಹೆಸರು ನಮೂದಿಸಿ, ತಹಶೀಲ್ದಾರರು ನೋಂದಣಿ ಮಾಡಿದ ನಂತರ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗುವುದು’ ಎಂದರು.
‘ಅನರ್ಹ ಅರ್ಜಿಗಳನ್ನು ಅಧಿಕಾರಿಗಳ ಮಟ್ಟದಲ್ಲೇ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು. ಆದರೆ, ಈ ಪರಿಶೀಲನೆಯೇ ಅಂತಿಮವಲ್ಲ. ಒಂದು ವೇಳೆ ಅಧಿಕಾರಿಗಳ ತಪ್ಪಿನಿಂದ ಅರ್ಹ ಅರ್ಜಿಯನ್ನು ವಿಸರ್ಜಿಸಲಾಗಿದ್ದರೆ ಅಂತಹ ಅರ್ಜಿಗಳನ್ನು ಮರು ಪರಿಶೀಲನೆಗೆ ಒಳಪಡಿಸಲಾಗುವುದು’ ಎಂದೂ ತಿಳಿಸಿದರು.
ಅಭಿಯಾನ ಮಾದರಿಯಲ್ಲಿ ಪೋಡಿ ದುರಸ್ತಿ: ‘ಪೋಡಿ ದುರಸ್ತಿಯ ಡಿಜಿಟಲ್ ಪ್ರಕ್ರಿಯೆಗೆ ತಂತ್ರಾಂಶ ರೂಪಿಸಲಾಗಿದೆ. ರಾಜ್ಯದಲ್ಲಿ ಒಟ್ಟು 1.96 ಲಕ್ಷ ಸರ್ಕಾರಿ ಸರ್ವೇ ನಂಬರ್ ಇದ್ದು, ಅವುಗಳನ್ನು ದುರಸ್ತಿಗೊಳಿಸಬೇಕು ಎಂಬುದು ನಮ್ಮ ಗುರಿ. ಮೊದಲ ಹಂತದಲ್ಲಿ 27,107 ಕಡತ ಸೃಷ್ಟಿಸಲಾಗಿದೆ. ಈ ಸಂಬಂಧ ಡಾಟಾ ಎಂಟ್ರಿ ಕೆಲಸವೂ ನಡೆಯುತ್ತಿದೆ. ಜೊತೆಗೆ ನಮೂನೆ 6 ರಿಂದ 10ರ ಸರ್ವೇ ಕೆಲಸಕ್ಕೆ ಶನಿವಾರ (ನ. 30) ಹಾಸನದಿಂದ ಚಾಲನೆ ನೀಡಲಾಗುವುದು. ಈ ಕೆಲಸ ಸಂಪೂರ್ಣವಾದರೆ 20 ಲಕ್ಷದಿಂದ 25 ಲಕ್ಷ ರೈತ ಕುಟುಂಬಗಳ ಹಲವು ದಶಕಗಳ ಸಮಸ್ಯೆ ಬಗೆಹರಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಹಿಂಗಾರು ನಷ್ಟ– ವಾರದೊಳಗೆ ಪರಿಹಾರ’
‘ರಾಜ್ಯದಲ್ಲಿ ಹಿಂಗಾರು ಮಳೆ ಅವಧಿಯಲ್ಲಿ 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು ₹ 120 ಕೋಟಿವರೆಗೆ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಳೆ ಹಾನಿಯಾದ ರೈತರ ಬ್ಯಾಂಕ್ ಖಾತೆಗಳಿಗೆ ವಾರದೊಳಗೆ ಪರಿಹಾರ ಹಣ ಜಮೆ ಆಗಲಿದೆ’ ಎಂದು ಕೃಷ್ಣ ಬೈರೇಗೌಡ ತಿಳಿಸಿದರು. ‘ಹಿಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆ ಹಾನಿ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಒಟ್ಟು ₹ 642 ಕೋಟಿ ಹಣ ಲಭ್ಯವಿದ್ದು ಈ ಹಣದಲ್ಲೇ ಪರಿಹಾರ ವಿತರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.