ಡಿ.ಕೆ ಶಿವಕುಮಾರ್
ಫೇಸ್‌ಬುಕ್ ಚಿತ್ರ
ಬೆಂಗಳೂರು: ‘ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಭೂಸ್ವಾಧೀನಕ್ಕೆ ನ್ಯಾಯಾಲಯಗಳು ನೀಡಿರುವ ಆದೇಶದ ಅನುಸಾರ ಹೆಚ್ಚುವರಿ ಪರಿಹಾರದ ಸರಾಸರಿಯಂತೆ ₹2.01 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಪಿ.ಎಚ್. ಪೂಜಾರ್ ಅವರ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರೂ ಆದ ಶಿವಕುಮಾರ್, ‘ಕೃಷ್ಣಾ ಮೇಲ್ದಂಡೆ ಯೋಜನೆ ಹಂತ–3ರಡಿ ಭೂಸ್ವಾಧೀನ ಕುರಿತಂತೆ ನ್ಯಾಯಾಲಯಗಳಲ್ಲಿ 28,407 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 29,556 ಎಕರೆ ಜಮೀನಿದೆ. ಹೆಚ್ಚುವರಿ ಪರಿಹಾರ ಘೋಷಣೆಯಾದ ಪ್ರಕರಣಗಳ ಸರಾಸರಿ ದರ ವನ್ನು ಪರಿಗಣಿಸಿ, ಈಗಾಗಲೇ ಭೂಸ್ವಾಧೀನಪಡಿಸಿಕೊಂಡ 29,566 ಎಕರೆಗೆ ₹66,563 ಕೋಟಿ ಹೆಚ್ಚುವರಿ ಪರಿಹಾರಧನ ಪಾವತಿಸಬೇಕಾಗುತ್ತದೆ. ಒಟ್ಟಾರೆ 1,33,867 ಎಕರೆ ಭೂಮಿ ಸ್ವಾಧೀನವಾಗಬೇಕಿದೆ’ ಎಂದರು.
‘₹2 ಲಕ್ಷ ಕೋಟಿ ಪರಿಹಾರ ನೀಡಲು ಸಾಧ್ಯವಾಗುತ್ತದೆಯೇ? ಈ ಯೋಜನೆ ವಿಚಾರದಲ್ಲಿ ದೊಡ್ಡ ಹಗರಣವೇ ನಡೆಯುತ್ತಿದೆ. ಭೂಮಿ ಪರಿಹಾರ ವಿಚಾರದಲ್ಲಿ ವಕೀಲರುಗಳು ಹಣ ಮಾಡುತ್ತಿದ್ದಾರೆ ವಿನಃ ರೈತರಿಗೆ ಪರಿಹಾರ ದೊರೆಯುವುದಿಲ್ಲ. ಆದ ಕಾರಣಕ್ಕೆ ಪರಿಷತ್ ಸದಸ್ಯರಾದ ಪೂಜಾರ್ ಅವರು ಅಲ್ಲಿನ ರೈತರನ್ನು ಸಮಾಧಾನ ಪಡಿಸಿದರೆ 15 ದಿನಗಳಲ್ಲಿ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತದೆ’ ಎಂದರು.
‘ಮತ್ತೆ ಅದೇ ಅಂಕಿ–ಅಂಶಗಳು, ಭರವಸೆಯನ್ನು ನೀಡುವುದು ಬೇಡ. ರೈತರ ಸಮಸ್ಯೆಗಳನ್ನು ಪರಿಗಣಿಸಿ, ಪರಿಹಾರ ನೀಡಿ, ಈ ಯೋಜನೆಯನ್ನು ಪೂರ್ಣಗೊಳಿಸಲು ಆದಷ್ಟು ಬೇಗ ಕ್ರಮ ವಹಿಸಬೇಕು’ ಎಂದು ಪೂಜಾರ್ ಒತ್ತಾಯಿಸಿದರು. ‘ಆ ಭಾಗದ ರೈತರ ಜೊತೆಗೆ ಸಭೆಯನ್ನು ಕರೆದು, ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.