ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿದ್ದು, ಜೂನ್ 30ರಂದು ಬೆಳಿಗ್ಗೆ 11ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಶಾಸಕರೊಂದಿಗೆ ಬಾಗಿನ ಅರ್ಪಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾವು ಅಧಿಕಾರಕ್ಕೆ ಬಂದಾಗಲೆಲ್ಲ ಮಳೆ ಬರುವುದಿಲ್ಲ, ಬರ ಬರುತ್ತದೆ ಅಂತಿದ್ದವರಿಗೆ ಈಗ ಪಾಪ ನಿದ್ದೆ ಬರುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಕೆರೆಕಟ್ಟೆಗಳು ತುಂಬುತ್ತಿವೆ. ಇದರಿಂದ ಬೆಳೆ ಚೆನ್ನಾಗಿ ಆಗುತ್ತದೆ ಎಂದು ಕೆಲವರಿಗೆ ಸಂಕಟವಾಗುತ್ತಿದೆ’ ಎಂದು ಬಿಜೆಪಿ ನಾಯಕರನ್ನು ಕುಟುಕಿದರು.
1960ರಿಂದ ಇದುವರೆಗೆ ಜೂನ್‌ನಲ್ಲೇ ಕೆಆರ್‌ಎಸ್ ಅಣೆಕಟ್ಟೆ ಭರ್ತಿಯಾಗಿರುವುದು ಇದೇ ಮೊದಲು. ಇದು ನಮ್ಮ ಭಾಗ್ಯ ಎಂದರು.
ಅಣೆಕಟ್ಟೆಗೆ ಧಕ್ಕೆಯಾಗುವುದಿಲ್ಲ:
‘ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ವಿಚಾರಕ್ಕೆ ಬೆಂಗಳೂರಿನಲ್ಲಿ ಮೊನ್ನೆ ಸಭೆ ಕರೆಯಲಾಗಿತ್ತು. ದೇವನಹಳ್ಳಿ ಚಲೋ ಹೋರಾಟದ ಕಾರಣದಿಂದ ಕೆಲವರು ಸಭೆಗೆ ಬಂದಿರಲಿಲ್ಲ. ಯಾವುದೇ ತರಹದ ಮಾಲಿನ್ಯ ಆಗುವುದಿಲ್ಲ ಮತ್ತು ಅಣೆಕಟ್ಟೆ ಸುರಕ್ಷತೆಗೆ ಧಕ್ಕೆಯಾಗುವುದಿಲ್ಲ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಹೋರಾಟಗಾರರ ಜೊತೆ ಮಾತನಾಡಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದವರು ನಕಲಿ ರೈತರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಾವೆಲ್ಲ ನಕಲಿ, ಅವರೇ ಒಳ್ಳೆಯವರು ಬಿಡಿ. ನಮ್ಮಲ್ಲಿ ಯಾರೂ ರೈತರಿಲ್ವಾ? ಕಿಸಾನ್ ಸಂಘ ಇದೆ ಅವರು ರೈತರಲ್ವಾ? ಅವರು ಹೋರಾಟ ಮಾಡಲಿ, ಅಭಿಫ್ರಾಯ ಕೊಡಲಿ. ಬೇರೆಯವರನ್ಕು ಮಾಡಬಾರದು. ಹೋರಾಟಗಾರರು ಸಭೆಗೆ ಬಂದಿದ್ರೆ ಸ್ವಾಗತವಿತ್ತು. ಜೆಡಿಎಸ್‌ನಲ್ಲಿ ಗುರುತಿಸಿಕೊಂಡ ರೈತರು ಸಭೆಗೆ ಬಂದಿರಲಿಲ್ಲ’ ಎಂದು ಹೇಳಿದರು.
ನ್ಯಾಯಾಲಯಕ್ಕೆ ಎಲ್ಲರೂ ತಲೆಬಾಗಬೇಕು: ಕಾವೇರಿ ಆರತಿ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಅನುಷ್ಠಾನಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ನ್ಯಾಯಾಲಯಕ್ಕೆ ಎಲ್ಲರು ತಲೆ ಬಾಗಬೇಕು. ನ್ಯಾಯಾಲಯಕ್ಕೆ ಏನು ಸಮಜಾಯಿಷಿ ಕೊಡಬೇಕೋ ನಮ್ಮ ಸರ್ಕಾರ ಕೊಡುತ್ತೆ. ತಡೆಯಾಜ್ಞೆ ತೆರವುಗೊಳಿಸಿದರೆ, ಹೋರಾಟಗಾರರ ಜೊತೆ ಮಾತನಾಡುತ್ತೇವೆ. ಸ್ಟೇ ಇದ್ದರೆ ನಾವು ಕೆಲಸ ಮಾಡುವುದಕ್ಕೆ ಆಗುವುದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.