
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಅಣೆಕಟ್ಟೆಯ ವಿಹಂಗಮ ನೋಟ (ಸಂಗ್ರಹ ಚಿತ್ರ)
ಮಂಡ್ಯ: ‘ಕೃಷ್ಣರಾಜ ಸಾಗರ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಗಳಲ್ಲಿ ಭೂ ಒತ್ತುವರಿ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಕೂಡಲೇ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಬೇಕು. ಗಡಿ ಕಲ್ಲುಗಳನ್ನು ನೆಟ್ಟು ವರದಿ ನೀಡಿ’ ಎಂದು ಉಪಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ.ಶಿವಕುಮಾರ್ ಅವರು ಮಂಡ್ಯ ಹಾಗೂ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಆದೇಶಿಸಿದ್ದಾರೆ.
ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಐಷಾರಾಮಿ ರೆಸಾರ್ಟ್‌ಗಳ ನಿರ್ಮಾಣ ಹಾಗೂ ಭೂ ಒತ್ತುವರಿಯಿಂದಾಗಿ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತಿದೆ. ಹೀಗಾಗಿ ಭೂ ಒತ್ತುವರಿ ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಒತ್ತಾಯಿಸಿದ್ದರು.
ಹಿನ್ನೀರಿನ ಪ್ರದೇಶದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ಕಾವಲು ವ್ಯವಸ್ಥೆ (ವಾಚ್ ಅಂಡ್ ವಾರ್ಡ್) ನೋಡಲು ಪೋಲೀಸ್ ಇಲಾಖೆ ಮತ್ತು ಪರಿಸರ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್.ಪೇಟೆ ತಾಲ್ಲೂಕುಗಳಲ್ಲಿ ಮತ್ತು ಮೈಸೂರು ಜಿಲ್ಲೆಯ ಕೆ.ಆರ್. ನಗರ, ಮೈಸೂರು ಮತ್ತು ಹುಣಸೂರು ತಾಲ್ಲೂಕಿನಲ್ಲಿ ಜಲಾಶಯದ ಹಿನ್ನೀರಿನ ಅಂಚಿನಲ್ಲಿರುವ ಭೂ ಮಾಲೀಕರು ಒತ್ತುವರಿ ಮಾಡುತ್ತಿರುವುದು ಮತ್ತು ಐಷಾರಾಮಿ ರೆಸಾರ್ಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಒತ್ತುವರಿಯಿಂದ ನೀರು ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿ, ನಾಲಾ ಕೊನೇ ಭಾಗದ ಮಳವಳ್ಳಿ, ಮದ್ದೂರು ಭಾಗದ ಸಾವಿರಾರು ಅಚ್ಚುಕಟ್ಟು ಪ್ರದೇಶದ ರೈತರಿಗೆ ವ್ಯವಸಾಯಕ್ಕೆ ನೀರೊದಗಿಸಲು ಹಾಗೂ ಕುಡಿಯುವ ನೀರಿಗಾಗಿ ತೊಂದರೆ ಉಂಟಾಗುತ್ತಿದೆ ಎಂಬುದನ್ನು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು.
2.76 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ:
ಕೃಷ್ಣರಾಜಸಾಗರ ಜಲಾಶಯದ ಹಿನ್ನೀರಿನ ಪ್ರದೇಶವು 26,640 ಎಕರೆಗಳಿದ್ದು, ಜಲಾಶಯದಿಂದ ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಸುಮಾರು 2.76 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಲಾಗುತ್ತಿದೆ. ಮೈಸೂರು ನಗರಕ್ಕೆ 1.579 ಟಿ.ಎಂ.ಸಿ ಅಡಿ ಹಾಗೂ ಬೆಂಗಳೂರು, ಇನ್ನಿತರ ನಗರ ಪಟ್ಟಣಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಲಾಗುತ್ತಿದೆ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳಿಗೆ ನೀರನ್ನು ಬಳಕೆ ಮಾಡಲಾಗುತ್ತಿದೆ.
ಕೃಷ್ಣರಾಜಸಾಗರದ ವಿವರ
ಕೃಷ್ಣರಾಜಸಾಗರ ಜಲಾಶಯವನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಬಹದ್ದೂರ್ ಅವರ ಕೈಂಕರ್ಯದಿಂದ ಸರ್ ಎಂ. ವಿಶ್ವೇಶ್ವರಯ್ಯ ಅವರ ತಾಂತ್ರಿಕ ನೈಪುಣ್ಯದಿಂದ 1911ನೇ ಇಸವಿಯಿಂದ 1931ನೇ ಇಸವಿಯವರೆಗೆ ನಿರ್ಮಿಸಲ್ಪಟ್ಟಿದೆ.
ಜಲಾಶಯವು 2.621 ಕಿ.ಮೀ. ಉದ್ದವಿದ್ದು, ತಳಪಾಯದಲ್ಲಿ 111 ಅಡಿಗಳಷ್ಟು ಅಗಲವಿದ್ದು, ತಳಮಟ್ಟದಿಂದ 130 ಅಡಿ ಎತ್ತರವಿದ್ದು, ಇದನ್ನು ಸಂಪೂರ್ಣವಾಗಿ ಕಲ್ಲುಕಟ್ಟಡ ಹಾಗೂ ಸುರ್ಕಿ ಗಾರೆಯಲ್ಲಿ ನಿರ್ಮಿಸಲಾಗಿದೆ. ಜಲಾಶಯದ ಶೇಖರಣೆಯ ಒಟ್ಟು ಸಾಮರ್ಥ್ಯ (49.452 ಟಿ.ಎಂ.ಸಿ) ಮತ್ತು ನೀರು ವ್ಯಾಪಿಸುವ ವಿಸ್ತೀರ್ಣ 130.00 ಚ.ಕಿ.ಮೀ ಹಾಗೂ ಸುತ್ತಳತೆ 320 ಕಿ.ಮೀ. ಹೊಂದಿದೆ.
‘ಡಿಸಿಎಂ ಆದೇಶ ಸ್ವಾಗತಾರ್ಹ’
ಕೆಆರ್ ಎಸ್ ಹಿನ್ನೀರಿನ ಪ್ರದೇಶದಲ್ಲಿ ಭೂ ಒತ್ತುವರಿ ಆಗುತ್ತಿರುವುದು ಕಂಡುಬಂದಿದೆ. ಭೂ ಒತ್ತುವರಿ ತೆರವುಗೊಳಿಸುವುದರಿಂದ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಹಕಾರಿಯಾಗಲಿದೆ. ಭೂ ಒತ್ತುವರಿ ತೆರವಿಗೆ ಉಪಮುಖ್ಯಮಂತ್ರಿ ಆದೇಶಿಸಿರುವುದು ನಿಜಕ್ಕೂ ಶ್ಲಾಘನೀಯ.-ರಮೇಶ ಬಂಡಿಸಿದ್ದೇಗೌಡ, ಶಾಸಕ, ಶ್ರೀರಂಗಪಟ್ಟಣ
‘ಅಕ್ರಮ ಚಟುವಟಿಕೆಗೆ ಕಡಿವಾಣ’
ಕೆಆರ್‌ಎಸ್ ಜಲಾಶಯಕ್ಕೆ 94 ವರ್ಷಗಳ ಇತಿಹಾಸವಿದೆ. ಬೆಂಗಳೂರು ಸೇರಿದಂತೆ ಮೈಸೂರು ಭಾಗದ ಜನತೆಗೆ ಕುಡಿಯುವ ನೀರಿನ ಜೊತೆಗೆ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಜಲಾಶಯದ ನೀರನ್ನು ಬಳಕೆ ಮಾಡಲಾಗುತ್ತಿದೆ. ಭೂ ಒತ್ತುವರಿ ತೆರವಿನ ಜೊತೆಗೆ ಅಕ್ರಮ ಚಟುವಟಿಕೆಗಳಿಗೂ ಕಡಿವಾಣ ಬೀಳಬೇಕು. ಡಿಸಿಎಂ ಆದೇಶದಿಂದ ರೈತರಿಗೆ ಅನುಕೂಲವಾಗಲಿದೆ.-ದಿನೇಶ್ ಗೂಳಿಗೌಡ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.