ADVERTISEMENT

ಆಗ ನಾವು ದಾರಿ ತಪ್ಪಿ ಅಧಿಕಾರಕ್ಕೆ ಬಂದಿದ್ವಿ, ಈಗ ವಿರೋಧ ಪಕ್ಷವೇ ಇಲ್ಲ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 9:30 IST
Last Updated 1 ಮಾರ್ಚ್ 2026, 9:30 IST
<div class="paragraphs"><p>ಕೆ.ಎಸ್. ಈಶ್ವರಪ್ಪ</p></div>

ಕೆ.ಎಸ್. ಈಶ್ವರಪ್ಪ

   

ಹುಬ್ಬಳ್ಳಿ: 'ರಾಜ್ಯದಲ್ಲಿ ವಿರೋಧ ಪಕ್ಷ ಸತ್ತು ಹೋಗಿದ್ದು, ತಾನು ಅಧಿಕಾರಕ್ಕೆ ಬರಲು ಆಡಳಿತ ಪಕ್ಷ ಹಾಳಾಗುವುದನ್ನು ಕಾಯುತ್ತಿದೆ' ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಬಿಜೆಪಿಗೆ ಎಂದಿಗೂ ಬಹುಮತ ಬಂದಿಲ್ಲ. ಈ ಹಿಂದೆ ದಾರಿ ತಪ್ಪಿ ನಾವು ಅಧಿಕಾರಕ್ಕೆ ಬಂದಿದ್ದು. ಪಕ್ಷದಲ್ಲಿ ಒಂದಷ್ಟು ಶುದ್ದೀಕರಣವಾಗಬೇಕಿದೆ. ಲಕ್ಷಾಂತರ ಮಂದಿ ಕಾರ್ಯಕರ್ತರು ನೋವು ಅನುಭವಿಸುತ್ತ ಪಕ್ಷದಲ್ಲಿ ದಿನ ದೂಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿರೀಕ್ಷೆಯಂತೆ ಎಲ್ಲವೂ ನಡೆಯುವ ಭರವಸೆಯಿದೆ. ಆ ದಿ‌ನಕ್ಕಾಗಿ ಕಾಯುತ್ತಿದ್ದು, ನಂತರ ಒಂದಷ್ಟು ಷರತ್ತುಗಳನ್ನು ಮುಂದಿಟ್ಟು ಪಕ್ಷದ ಕಾರ್ಯದಲ್ಲಿ ಸಕ್ರಿಯನಾಗುತ್ತೇನೆ' ಎಂದರು.

ADVERTISEMENT

'ಮಗನಿಗೆ ಟಿಕೆಟ್ ತಪ್ಪಿಸಿದರು ಎನ್ನುವ ಒಂದೇ ಕಾರಣಕ್ಕಾಗಿ ನಾನು ಬಿಜೆಪಿಯಿಂದ ದೂರ ಉಳಿದಿಲ್ಲ. ಕೆಲವಷ್ಟು ಕಾರಣಗಳೂ ಇವೆ. ಮೊದಲು ಪಕ್ಷ ಶುದ್ದೀಕರಣವಾಗಬೇಕು ಎನ್ನುವುದು ನನ್ನ ಹೆಬ್ಬಯಕೆ. ಅದು, ಏನು ಎನ್ನುವುದು ವರಿಷ್ಠರಿಗೆ ತಿಳಿದಿದೆ' ಎಂದು ಹೇಳಿದರು.

'ರಾಜಕೀಯ ವೈರಾಗ್ಯ ಎನ್ನುವುದು ನನ್ನಲ್ಲಿ ಇಲ್ಲ. ಹೋರಾಡುತ್ತಲೇ ಬದುಕು ಕಟ್ಟಿಕೊಂಡವನು ನಾನು. ಸದ್ಯ ರಾಯಣ್ಣ ಬ್ರಿಗೇಡ್ ಕಾರ್ಯಕ್ರಮವೇನೂ ಮಾಡುತ್ತಿಲ್ಲ. ಹಿಂದುತ್ವ ಮತ್ತು ಧರ್ಮದ ಕಾರ್ಯಕ್ಕೆ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ' ಎಂದರು.

ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ: 'ರಾಜ್ಯ ಕಾಂಗ್ರೆಸ್‌ನಲ್ಲಿ ಮಿತಿ ಮೀರಿದ ಗುಂಪುಗಾರಿಕೆ ನಡೆಯುತ್ತಿದ್ದು, ಹೈಕಮಾಂಡ್ ಇದೆಯೋ ಇಲ್ಲವೋ ತಿಳಿಯುತ್ತಿಲ್ಲ. ಡಿ.ಕೆ. ಶಿವಕುಮಾರ್ ಹಾಗೂ ದಲಿತ ನಾಯಕರ ಬೆಂಬಲಿಗರು, ತಮ್ಮ ನಾಯಕನೇ ಮುಂದಿನ ಸಿಎಂ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ತಾನೇ ಐದು ವರ್ಷ ಸಿಎಂ ಎನ್ನುತ್ತಾರೆ. ಬಹುಮತ ಪಡೆದ, 125 ವರ್ಷದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಪರಿಸ್ಥಿತಿ ಬಂದಿರುವುದು ವಿಷಾದನೀಯ' ಎಂದು ವ್ಯಗ್ಯವಾಡಿದರು.

'ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೆಲ್ಲ ನೆನಗುದಿಗೆ ಬಿದ್ದಿವೆ. ಆಡಳಿತ ಪಕ್ಷದ ಪ್ರತಿ ಶಾಸಕರಿಗೆ ₹50 ಕೋಟಿ ನೀಡುವುದಾಗಿ ಸಿಎಂ ಘೋಷಿಸಿದ್ದು, ಈಗ ಆ ಸುದ್ದಿಯೇ ಇಲ್ಲ. ಕಾಂಗ್ರೆಸ್ ಶಾಸಕರಲ್ಲಿ ಅಧಿಕಾರ ದಾಹ ಹೆಚ್ಚಾಗಿರುವುದರಿಂದ, ಆ ಕುರಿತು ಯಾರೂ ಧ್ವನಿ ಎತ್ತುತ್ತಿಲ್ಲ. ರಾಜ್ಯದ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಸರ್ಕಾರ ಮುಂದಾಗಬೇಕಿತ್ತು,' ಎಂದ ಈಶ್ವರಪ್ಪ, 'ಉದ್ಯೋಗವಿಲ್ಲದೆ ಯುವಶಕ್ತಿಯ ಆಕ್ರೋಶ ಭುಗಿಲೆದ್ದಿದೆ' ಎಂದು ಎಚ್ಚರಿಸಿದರು.

'ಹಿಂದುಗಳ ಮೇಲೆ ಹಲ್ಲೆ ಹಾಗೂ ದೇಶದ್ರೋಹ ಚಟುವಟಿಕೆಯಲ್ಲಿ ನಿರತರಾಗಿರುವ ಮುಸ್ಲಿಮರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದರೆ, ಬಾಗಲಕೋಟೆಯಲ್ಲಿ ಕಲ್ಲೆಸೆತ ಪ್ರಕರಣಗಳು ಮರುಕಳಿಸುತ್ತಿರಲಿಲ್ಲ. ಗೂಂಡಾ ಮನಸ್ಥಿತಿಯವರಿಗೆ ತಾವು ಏನೇ ಮಾಡಿದರೂ ನಡೆಯುತ್ತದೆ, ಸರ್ಕಾರ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತದೆ ಎನ್ನುವ ಭಾವನೆ ಹೆಚ್ಚಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೂಂಡಾಗಳ ಕಾರುಬಾರು,: ಈಶ್ವರಪ್ಪ

'ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹೆಚ್ಚಾಗಿರುವುದರಿಂದ ಗೂಂಡಾಗಳ, ದೇಶದ್ರೋಹಿಗಳ ಕಾರುಬಾರು ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಯು ಹಿಂದುತ್ವ ಹಾಗೂ ರಾಷ್ಟ್ರದ ಮೇಲೆ ನಡೆಯಲಿದ್ದು, ಹಿಂದುತ್ವ ಉಳಿಸುವವರು ಮಾತ್ರ ಗೆಲುವು ಸಾಧಿಸುತ್ತಾರೆ' ಎಂದು ಕೆ.ಎಸ್. ಈಶ್ವರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.