ADVERTISEMENT

ಅನರ್ಹ ಶಾಸಕರು ಬಿಜೆಪಿ ಮನೆಯ ಅಳಿಯಂದಿರು: ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 9:57 IST
Last Updated 26 ಸೆಪ್ಟೆಂಬರ್ 2019, 9:57 IST
ಸೋದೆ ವಾದಿರಾಜ ಮಠಕ್ಕೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ
ಸೋದೆ ವಾದಿರಾಜ ಮಠಕ್ಕೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ   

ಶಿರಸಿ:‘ಅನರ್ಹ ಶಾಸಕರು ಬಿಜೆಪಿ ಮನೆಯ ಅಳಿಯಂದಿರು, ನಮ್ಮನ್ನು ನಂಬಿ ಬಂದವರಿಗೆ ಮೋಸ ಮಾಡುವುದಿಲ್ಲ. ಅವರಿಂದಲೇ ಇಂದು ಬಿಜೆಪಿ ಅಧಿಕಾರದಲ್ಲಿದೆ’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ತಾಲ್ಲೂಕಿನ ಸೋದೆ ವಾದಿರಾಜ ಮಠಕ್ಕೆ ಕುಟುಂಬ ಸದಸ್ಯರೊಂದಿಗೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮನೆಯ 104 ಮಕ್ಕಳು, ಜೊತೆಗೆ ಹೊಸ ಅಳಿಯಂದಿರನ್ನು ಸೇರಿಸಿಕೊಂಡು ಬಹುಮತದ ಸರ್ಕಾರ ರಚಿಸಲಾಗುವುದು’ ಎಂದರು.

ನ್ಯಾಯಾಲಯದ ತೀರ್ಪು ಶಾಸಕರಾಗಿ ಅನರ್ಹಗೊಂಡಿರುವವರ ಪರ ಬರುವ ವಿಶ್ವಾಸವಿದೆ. ಒಂದೊಮ್ಮೆ ಅವರು ಅನರ್ಹಗೊಂಡರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಿದ್ದರಾಮಯ್ಯ ಗೆಲ್ಲುವ ರಣಕಹಳೆ ಊದಿ ಊದಿ ನೆಗೆದು ಬಿದ್ದಿದ್ದಾರೆ. ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಿದ್ದಾರೆ. ವಿರೋಧ ಪಕ್ಷದ ನಾಯಕನಾಗಲೂ ವಿಫಲವಾಗಿರುವ ಅವರು ರಾಜಕೀಯವಾಗಿ ಬದುಕಿದ್ದೇನೆ ಅನ್ನುವುದನ್ನು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.