
ಬೆಂಗಳೂರು: ‘ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಪದಾಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳು ಯಾರೆಂಬುದನ್ನು ಸದ್ಯ ಪ್ರಕಟಿಸಬಾರದು’ ಎಂದು ಹೈಕೋರ್ಟ್ ಆದೇಶಿಸಿದೆ.
‘ಚುನಾವಣೆಯಲ್ಲಿ ನನ್ನನ್ನೂ ಅಭ್ಯರ್ಥಿಯನ್ನಾಗಿ ಪರಿಗಣಿಸಲು ನಿರ್ದೇಶಿಸಬೇಕು’ ಎಂದು ಕೋರಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಕೆ.ಎನ್.ಶಾಂತಕುಮಾರ್ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಸ್.ಎಸ್.ನಾಗಾನಂದ ಅವರ ವಾದ ಮಾನ್ಯ ಮಾಡಿದ ನ್ಯಾಯಪೀಠವು, ‘ನಾಮಪತ್ರ ಪರಿಶೀಲನೆ ಮತ್ತು ಅದನ್ನು ತಿರಸ್ಕರಿಸುವ ಮುನ್ನ ಅರ್ಜಿದಾರರು ₹200 ಚಂದಾ ಹಣ ಪಾವತಿಸಿದ್ದಾರೆಯೇ? ಹಣ ಪಾವತಿಸಿದ ವಿಚಾರವನ್ನು ಚುನಾವಣಾ ಅಧಿಕಾರಿ ಗಮನಕ್ಕೆ ತರಲಾಗಿದೆಯೇ? ಎಂಬ ಎರಡು ಸರಳ ಅಂಶಗಳನ್ನು ಖಾತರಿಪಡಿಸಿಕೊಳ್ಳಬೇಕಿದೆ. ಹಾಗಾಗಿ, ಈ ಸೀಮಿತ ವಿಚಾರಕ್ಕೆ ಸಂಬಂಧಿಸಿದಂತೆ ನಾಮಪತ್ರ ಪರಿಶೀಲನಾ ಪ್ರಕ್ರಿಯೆಯ ವಿಡಿಯೊ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ಕೆಎಸ್‌ಸಿಎಗೆ ನಿರ್ದೇಶಿಸಿತು.
‘ವಿಚಾರಣೆಯನ್ನು ಗುರುವಾರ (ನ. 27) ಬೆಳಿಗ್ಗೆ 10.30ಕ್ಕೆ ಆದ್ಯತೆ ನೀಡಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಪೀಠವು ತಿಳಿಸಿತು.
ಕೋರಿಕೆ ಏನು?
ಡಿಸೆಂಬರ್ 7ರಂದು ನಡೆಯಲಿರುವ ಚುನಾವಣೆಯ ಪ್ರಕ್ರಿಯೆಯ ಭಾಗವಾಗಿ ಅರ್ಜಿದಾರರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ‘ಅವರ ಸದಸ್ಯತ್ವದ ಹಿಂಬಾಕಿ ಇದೆ’ ಎಂಬ ಕಾರಣಕ್ಕೆ ನಾಮಪತ್ರ ತಿರಸ್ಕರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.