ADVERTISEMENT

ಕೆಎಸ್‌ಡಿಎಲ್‌ ಲಂಚ ಪ್ರಕರಣ: ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ವಿರುದ್ಧ ದೋಷಾರೋಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2024, 16:14 IST
Last Updated 6 ಡಿಸೆಂಬರ್ 2024, 16:14 IST
<div class="paragraphs"><p>ಮಾಡಾಳ್ ವಿರೂಪಾಕ್ಷಪ್ಪ</p></div>

ಮಾಡಾಳ್ ವಿರೂಪಾಕ್ಷಪ್ಪ

   

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ (ಕೆಎಸ್‌ಡಿಎಲ್‌) ರಾಸಾಯನಿಕ ಪೂರೈಕೆ ಟೆಂಡರ್‌ ನೀಡಲು ಬಿಜೆಪಿ ಮಾಜಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ಅವರ ಮಗ ಎಂ.ವಿ. ಪ್ರಶಾಂತ್‌ ಕುಮಾರ್ ಲಂಚ ಪಡೆಯಲು ಮುಂದಾಗಿದ್ದು ಸಾಬೀತಾಗಿದೆ ಎಂದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಕೆಎಸ್‌ಡಿಎಲ್‌ಗೆ ಸಂಬಂಧಿಸಿದಂತೆ 2023ರಲ್ಲಿ ₹40 ಲಕ್ಷ ಲಂಚ ಪಡೆದ ಪ್ರಕರಣದ ತನಿಖೆ ನಡೆಸುವಾಗ, ಇನ್ನೂ ₹90 ಲಕ್ಷ ಲಂಚದ ಹಣ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಹೆಚ್ಚುವರಿ ದೊಷಾರೋ‍ಪ ಪಟ್ಟಿ ಸಲ್ಲಿಸಿದ್ದಾರೆ. ಅದರಲ್ಲಿ ಪ್ರಶಾಂತ್ ಅವರನ್ನು ಮೊದಲ ಆರೋಪಿ, ಲಂಚ ನೀಡಿದ ಕಂಪನಿಯ ನೌಕರ ಆಲ್ಬರ್ಟ್‌ ನಿಕೋಲಸ್‌ ಅವರನ್ನು ಎರಡನೇ ಆರೋಪಿಯನ್ನಾಗಿಸಲಾಗಿದೆ.

ADVERTISEMENT

‘ಕೆಎಸ್‌ಡಿಎಲ್‌ನ ಟೆಂಡರ್ ಪ್ರಕ್ರಿಯೆಯಲ್ಲಿ ಕರ್ನಾಟಕ ಅರೋಮಾಸ್‌ ಕಂಪನಿಗೆ ಅನುಕೂಲ ಮಾಡಿಕೊಡಲು ₹90 ಲಕ್ಷ ಲಂಚಕ್ಕೆ ಪ್ರಶಾಂತ್ ಬೇಡಿಕೆ ಇಟ್ಟಿದ್ದರು. ಒಳಚರಂಡಿ ಮಂಡಳಿ ಲೆಕ್ಕಾಧಿಕಾರಿಯಾಗಿದ್ದ ಪ್ರಶಾಂತ್ ಅವರಿಗೂ, ಕೆಎಸ್‌ಡಿಎಲ್‌ಗೂ ಯಾವುದೇ ಸಂಬಂಧ ಇರಲಿಲ್ಲ. ಆದರೆ ಅವರ ತಂದೆ ಮತ್ತು ಶಾಸಕ ವಿರೂಪಾಕ್ಷಪ್ಪ ಮಾಡಾಳ್‌ ನಿಗಮದ ಅಧ್ಯಕ್ಷರಾಗಿದ್ದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ.

‘ಆಲ್ಬರ್ಟ್‌ ನಿಕೋಲಸ್‌ ಅವರ ಕಂಪನಿಗೆ ಅನುಕೂಲ ಮಾಡಿಕೊಡಲೆಂದೇ ಲಂಚ ಪಡೆದುಕೊಂಡಿದ್ಕಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ವಾಟ್ಸ್‌ಆ್ಯಪ್‌ನಲ್ಲಿ ಈ ಸಂಬಂಧ ಇಬ್ಬರೂ ಚಾಟ್‌ ನಡೆಸಿದ್ದು, ಅದನ್ನು ಡಿಲೀಟ್ ಮಾಡಿದ್ದರು. ಆದರೆ ಅವನ್ನು ರಿಟ್ರೀವ್ ಮಾಡಿ ಸಾಕ್ಷ್ಯ ಸಂಗ್ರಹಿಸಲಾಗಿದೆ’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

‘ಬೇರೆ ಕಂಪನಿಗಳು ಸಲ್ಲಿಸಿರುವ ಟೆಂಡರ್‌ಗಳನ್ನು ತಿರಸ್ಕರಿಸುವ ಬಗ್ಗೆ, ಇಬ್ಬರ ನಡುವೆ ಚರ್ಚೆ ನಡೆದಿದೆ. ಲಂಚದ ಹಣದ ಬಗ್ಗೆಯೂ ಚರ್ಚೆ ನಡೆದಿದೆ. ₹45 ಲಕ್ಷ ಲಂಚವಿದ್ದ ತಲಾ ಎರಡು ಬ್ಯಾಗ್‌ಗಳನ್ನು ಕಳುಹಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲವೂ ದೊರೆತಿದ್ದು, ಪ್ರಶಾಂತ್ ಕುಮಾರ್ ಲಂಚ ಪಡೆಯಲು ಮುಂದಾಗಿದ್ದರು ಎಂಬುದು ಸಾಬೀತಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.